ಕಾಂಗ್ರೆಸ್ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್ ಕುಮಾರ್ ಕಟೀಲು
ಕಾರವಾರದಲ್ಲಿ ವಿಜಯ ಸಂಕಲ್ಪ ಯಾತ್ರೆ
Team Udayavani, Feb 8, 2023, 12:08 AM IST
ಕಾರವಾರ: ಭಯೋತ್ಪಾದನೆ ಹುಟ್ಟಿ ಹಾಕಿದ್ದೇ ಕಾಂಗ್ರೆಸ್. ರಾಜ್ಯದಲ್ಲಿ ಅತಿ ಹೆಚ್ಚು ಹಿಂದೂಗಳ ಹತ್ಯೆಯಾದುದು ಸಿದ್ದರಾಮಯ್ಯ ಕಾಲದಲ್ಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಆರೋಪಿಸಿದರು.
ಕಾರವಾರದಲ್ಲಿ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನರಹಂತಕ. ಡಿವೈಎಸ್ಪಿ ಗಣಪತಿ, ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ ಗಳಿಗೆ ಕಾಂಗ್ರೆಸ್ ಕಾರಣ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಹತ್ಯೆಗೆ ಕಾರಣರಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣೀರು ಬರಿಸಿದರು. ಮತ್ತೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಕಣ್ಣೀರು ಹಾಕಿದರು. ಆದರೆ ಕಣ್ಣೀರು ಒರೆಸಿದ್ದು ಆ ಬಳಿಕ ಮುಖ್ಯಮಂತ್ರಿಯಾದ ಯಡಿಯೂರಪ್ಪ ಮಾತ್ರ ಎಂದರು. ಬೊಮ್ಮಾಯಿ ಸರಕಾರಕ್ಕೆ ಯಡಿಯೂರಪ್ಪ ಮಾರ್ಗದರ್ಶನ ಇದೆ. ಕಾಂಗ್ರೆಸ್ ಒಡೆದು ಆಳುತ್ತಿದೆ. ಕಾಂಗ್ರೆಸ್‌ನವರು ಟಿಪ್ಪು ಜಯಂತಿ ಮಾಡಿ ಸಮಾಜದಲ್ಲಿ ಗಲಭೆ ಹುಟ್ಟು ಹಾಕಿದರು. ಈ ದೇಶಕ್ಕೆ ಟಿಪ್ಪು ಬೇಕಾ, ಸಾವರ್ಕರ್ ಬೇಕಾ ಎಂದು ಪ್ರಶ್ನಿಸಿದ ಅವರು, ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕುಕ್ಕರ್ ಪ್ರಸ್ತಾವ
ತೀರ್ಥಹಳ್ಳಿ ಕುಕ್ಕರ್ ಸಿಡಿದರೆ ರಾಷ್ಟ್ರ ಒಡೆಯುತ್ತದೆ. ಬೆಳಗಾವಿ ಕುಕ್ಕರ್ ಸ್ಫೋಟಿಸಿದರೆ ಡಿಕೆಶಿ ಮನೆ ಒಡೆಯುತ್ತದೆ ಎಂದು ನಳಿನ್ ಹೇಳಿದರು. ಶಾಸಕಿ ರೂಪಾಲಿ ನಾಯ್ಕ, ಮಹೇಶ್ ಟೆಂಗಿನಕಾಯಿ ಮುಂತಾದವರಿದ್ದರು.