ಕಾಸರಗೋಡಿನಲ್ಲಿ ಹೊಸ ಪ್ರಕರಣಗಳಿಲ್ಲ
Team Udayavani, Apr 24, 2020, 6:08 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರವೂ ಹೊಸ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿಲ್ಲ. ಇದೇ ವೇಳೆ ಆರು ಮಂದಿ ಗುಣಮುಖರಾಗಿದ್ದಾರೆ. ಅವರಲ್ಲಿ ನಾಲ್ವರು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ , ಇಬ್ಬರು ಕಾಂಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಈ ವರೆಗೆ ಸೋಂಕು ಖಚಿತಗೊಂಡಿದ್ದ 152 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 20 ಕೋವಿಡ್ ಪಾಸಿಟಿವ್ ಪ್ರಕರಣ ಗಳಿವೆ. ಜಿಲ್ಲೆಯಲ್ಲಿ ಗುರುವಾರ 3,126 ಮಂದಿ ನಿಗಾ ದಲ್ಲಿದ್ದಾರೆ. ಗುರುವಾರ ಇಬ್ಬರನ್ನು ಹೊಸದಾಗಿ ಐಸೊಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ. 625 ಮಂದಿ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 3,503 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 2,710 ಮಂದಿಯ ಸ್ಯಾಂಪಲ್ ಫಲಿತಾಂಶ ನೆಗೆಟಿವ್ ಬಂದಿವೆ. 488 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
148 ಕೇಸು ದಾಖಲು
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕಾಸರ ಗೋಡು ಜಿಲ್ಲೆಯಲ್ಲಿ 148 ಪ್ರಕರಣಗಳನ್ನು ದಾಖಲಿಸಲಾಗಿದೆ. 51 ಮಂದಿಯನ್ನು ಬಂಧಿಸಿ, 19 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1,620 ಕೇಸುಗಳನ್ನು ದಾಖಲಿಸಲಾಗಿದ್ದು, 1,915 ಮಂದಿಯನ್ನು ಬಂಧಿಸಲಾಗಿದೆ.
ವಾಹನಗಳ ರೋಗಾಣು ಮುಕ್ತಿ ಸೌಲಭ್ಯ ಆರಂಭ
ಮೋಟಾರು ವಾಹನ ಇಲಾಖೆಯ ಕಾಸರಗೋಡು ಆರ್‌ಟಿಒ ವಿಭಾಗ ಮತ್ತು ಪಯ್ಯನ್ನೂರು ರೋಟರಿ ಕ್ಲಬ್ ರಾಜ್ಯದ ಗಡಿ ಪ್ರದೇಶ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಸೌಲಭ್ಯ ಆರಂಭಿಸಿದ್ದು, ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಉದ್ಘಾಟಿಸಿದರು.
ಕೇರಳದಲ್ಲಿ 10 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ಗುರುವಾರ ಒಟ್ಟು 10 ಮಂದಿಗೆ ಕೋವಿಡ್ 19 ವೈರಸ್ ಸೋಂಕು ದೃಢಗೊಂಡಿದೆ. ಇಡುಕ್ಕಿ-4, ಕೋಯಿಕ್ಕೋಡ್-2, ಕೋಟ್ಟಯಂ-2, ಕೊಲ್ಲಂ-1 ಮತ್ತು ತಿರುವನಂತಪುರ-1 ಪ್ರಕರಣ ವರದಿಯಾಗಿದೆ.
ಸೋಂಕಿತರ ಪೈಕಿ ನಾಲ್ವರು ಅನ್ಯ ರಾಜ್ಯದಿಂದ ಬಂದವರು, ಇಬ್ಬರು ವಿದೇಶದಿಂದ ಬಂದವರು ಮತ್ತು 4 ಮಂದಿಗೆ ಸಂಪರ್ಕದಿಂದ ಸೋಂಕು ಹರಡಿದೆ. ಈ ವರೆಗೆ ರಾಜ್ಯದಲ್ಲಿ 447 ಮಂದಿಗೆ ಕೋವಿಡ್ 19 ವೈರಸ್ ಸೋಂಕು ದೃಢೀಕರಿಸಲಾಗಿದೆ. ಪ್ರಸ್ತುತ 129 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.