ಉಡುಪಿ: ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಇಬ್ಬರಿಗೆ ಗಾಯ
Team Udayavani, Feb 4, 2023, 1:21 AM IST
ಉಡುಪಿ: ಪಾನಮತ್ತ ಟೆಂಪೋ ಚಾಲಕನೋರ್ವ ಮತ್ತಿನಲ್ಲಿ ಅಡ್ಡಾ ದಿಡ್ಡಿಯಾಗಿ ಚಲಾಯಿಸಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಕ್ಕಳಿಬ್ಬರು ಗಾಯಗೊಂಡ ಘಟನೆ ಆದಿ ಉಡುಪಿ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಕೊಡವೂರಿಗೆ ಆಗಮಿಸಿದ್ದ ಕುಟುಂಬವೊಂದು ಕಾರಿನಲ್ಲಿ ಉಡುಪಿಗೆ ವಾಪಾಸಾಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಟೆಂಪೋ ಢಿಕ್ಕಿ ಹೊಡೆದಿದ್ದು ಈ ವೇಳೆ ಕಾರಿನಲ್ಲಿದ್ದ ಮಕ್ಕಳಿಗೆ ಗಾಯಗಳಾಗಿವೆ. ಟೆಂಪೋ ಚಾಲಕ ಮದ್ಯಪಾನ ಮಾಡಿದ್ದು, ಅದೇ ಮತ್ತಿನಲ್ಲಿದ್ದು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿದ್ದರ ಪರಿಣಾಮ ಘಟನೆ ಸಂಭವಿಸಿದೆ.
ಘಟನೆ ನಡೆದು ಹಲವು ಸಮಯ ಕಳೆದರೂ ಕೂಡ ಸ್ಥಳಕ್ಕೆ ಪೊಲೀಸರು ಆಗಮಿಸದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆಗಮಿಸಿದ ಪೊಲೀಸರು ಟೆಂಪೋ ಚಾಲಕನನ್ನು ವಶಕ್ಕೆ ಪಡೆದರು.