“ವಳಕಾಡು ಶಾಲೆಯ ತರಗತಿಗೊಂದು ಗ್ರಂಥಾಲಯ ರಾಜ್ಯಕ್ಕೇ ಮಾದರಿ’
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಾಲೆಗೆ ಭೇಟಿ
Team Udayavani, Oct 9, 2021, 5:04 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ವ್ಯಾಪಕ ಪ್ರವಾಸ ಮಾಡಿದ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ವಳಕಾಡು ಪ್ರೌಢಶಾಲೆಯಲ್ಲಿರುವ ತರಗತಿಗೊಂದು ಗ್ರಂಥಾಲಯ ರಾಜ್ಯಕ್ಕೇ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.
ವಳಕಾಡು ಶಾಲೆಗೆ ಭೇಟಿ ನೀಡಿದ ಅವರು, “ಶ್ರದ್ಧಾ’ ವಾಚನಾಲಯವನ್ನು (ರೀಡಿಂಗ್ ರೂಮ್) ಉದ್ಘಾಟಿಸಿದರು. ಸ್ಮಾರ್ಟ್ ಕ್ಲಾಸ್ ರೂಮ್ ಸಹಿತ ವಿವಿಧ ತರಗತಿಗಳಿಗೆ ಭೇಟಿ ನೀಡಿ ಮಕ್ಕಳು, ಶಿಕ್ಷಕರ ಜತೆ ಮಾತುಕತೆ ನಡೆಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯ ಏಳು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಒಂದಕ್ಕಿಂತ ಒಂದು ಶಾಲೆಗಳು ಎಸ್‌ಡಿಎಂಸಿ ಮತ್ತು ಹಳೆ ವಿದ್ಯಾರ್ಥಿಗಳಿಂದ ಅತ್ಯುತ್ತಮವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳ ಹಾಜರಾತಿ ನವರಾತ್ರಿ ಹಬ್ಬವಿದ್ದರೂ ಉತ್ತಮವಾಗಿದೆ ಎಂದರು.
ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಶಾಲೆಯಲ್ಲಿ ಹತ್ತು ರೂಮುಗಳು ಮಂಜೂರಾದರೂ ಹೆಚ್ಚುವರಿಯಾಗಿ ಒಂದು ಸಭಾಂಗಣವನ್ನು ನಿರ್ಮಿಸಿದ್ದಾರೆ ಎಂದವರು ತಿಳಿಸಿದರು.
ಡಿಡಿಪಿಐ ಎನ್.ಎಚ್. ನಾಗೂರ, ಬಿಇಒ ನಾಗೇಂದ್ರಪ್ಪ, ಡಯಟ್ ಪ್ರಾಂಶುಪಾಲ ವೇದಮೂರ್ತಿ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ಯಾಮಪ್ರಸಾದ್ ಕುಡ್ವ, ಸದಸ್ಯ ರವಿರಾಜ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಭೂಷಣ ಶೇಟ್, ಮುಖ್ಯ ಶಿಕ್ಷಕಿ ನಿರ್ಮಲಾ, ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಕುಸುಮಾ, ಬಿಆರ್‌ಸಿ ಸಮನ್ವಯಕಾರ ಉಮಾ ಪಿ., ಶೈಕ್ಷಣಿಕ ಸಮನ್ವಯಕಾರ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಚೀನಾದ ಕಾರನ್ನ ನಮ್ಮಲ್ಲಿ ಮಾರಬೇಡಿ: ಟೆಸ್ಲಾಗೆ ಕೇಂದ್ರದ ಸೂಚನೆ
ಇದಕ್ಕೂ ಮುನ್ನ ಸಚಿವರು ಕುಂದಾಪುರದ ಸ.ಪ.ಪೂ. ಕಾಲೇಜು, ಅಮಾಸೆಬೈಲು ಸ.ಹಿ.ಪ್ರಾ. ಶಾಲೆ, ತೆಕ್ಕಟ್ಟೆ ಕುವೆಂಪು ಮಾದರಿ ಹಿ.ಪ್ರಾ. ಶಾಲೆ, ಮಣೂರು ಸ.ಹಿ.ಪ್ರಾ. ಶಾಲೆ, ಕೊಲ್ಲೂರು, ಕುಂಭಾಸಿ ಆನೆಗುಡ್ಡೆ, ಕೋಟ ಅಮೃತೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿದರು.
1ನೇ ಕ್ಲಾಸ್ ಕೂಡಲೇ ಆರಂಭಿಸಿ ಸಾರ್!
ಒಂದನೇ ಕ್ಲಾಸ್‌ನ್ನು ಕೂಡಲೇ ಆರಂಭಿಸಬೇಕು ಎಂದು ವಳಕಾಡು ಶಾಲೆಯ ನಾಲ್ಕನೆಯ ತರಗತಿ ವಿದ್ಯಾರ್ಥಿನಿ ಕನ್ನರ್ಪಾಡಿಯ ಸಂಪ್ರೀತಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದಳು. ಸಚಿವರ ಪ್ರಶ್ನೆಗೆ ಉತ್ತರಿಸಿದ ಈಕೆ, “ಶಾಲೆಯಲ್ಲಿ ಇತರ ಮಕ್ಕಳೂ ಇರುತ್ತಾರೆ. ಮನೆಯಲ್ಲಾದರೆ ನಾವು ಮಾತ್ರ ಇರಬೇಕು. ಆನ್‌ಲೈನ್ ತರಗತಿ ಅರ್ಥ ಆಗುವುದಿಲ್ಲ’ ಎಂದಳು.