ನಾವೀಗ ಜಲ ಸಿರಿವಂತರು, ಕರ್ನಾಟಕಕ್ಕಿದು ಪಾಠ

Team Udayavani, Jan 27, 2020, 3:08 AM IST

ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ ನಮ್ಮ ನದಿ, ಹಳ್ಳ-ಕೊಳ್ಳಗಳು ಬರಿದಾಗುತ್ತಿರುವುದು ಕಂಡು ಕಣ್ಣೀರಿಟ್ಟಿದ್ದೆವು, ಬದುಕು ನೆನಪಿಸಿಕೊಂಡು ಮೈ ನಡುಗಿಸಿದ್ದೆವು. ಆದರೆ, ನಾನು ಹೆಮ್ಮೆಯಿಂದ ಹೇಳುತ್ತೇನೆ. ನಾವೀಗ ನೀರಿನ ಶ್ರೀಮಂತರು!

ಈ ಮಾತುಗಳನ್ನು ಹೇಳುವಾಗ ಆ ಅಜ್ಜನ ಕಣ್ಣಲ್ಲಿ ಯುದ್ಧ ಗೆದ್ದ ಸಂಭ್ರಮವಿತ್ತು. ಹಿಂದೆ ಅನುಭವಿಸಿದ ಸಂಕಷ್ಟದ ನೋವಿತ್ತು. ನೋವು ಮೆಟ್ಟಿ ನಿಂತ ಸಾರ್ಥಕ ಶ್ರಮದ ಸಂಭ್ರಮ ಪ್ರತಿ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ದೇಶದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ಹಾಗೂ ಮರುಭೂಮಿ ನಾಡು ಎಂದೇ ಪರಿಗಣಿಸುವ ರಾಜಸ್ಥಾನದ ಅಲ್ವಾರ ಜಿಲ್ಲೆಯ ಮಂಡಲವಾಸ್‌ ಗ್ರಾಮದ ಹಿರಿಯ ಜಗದೀಶ ಮೀನಾ ಅವರ ಹೆಮ್ಮೆಯ ನುಡಿಗಳಿವು.

25 ವರ್ಷಗಳ ಹಿಂದೆ ಮಂಡಲವಾಸ್‌ ಗ್ರಾಮದ ಜಲಸಂಕಷ್ಟ ಸ್ಥಿತಿ, ನೀರಿಗಾಗಿ ಪಟ್ಟ ಪಡಿಪಾಟಲು, ಜಲತಜ್ಞ ಡಾ| ರಾಜೇಂದ್ರ ಸಿಂಗ್‌ ಮಾರ್ಗದರ್ಶನದಲ್ಲಿ ಸರ್ಕಾರದ ಯಾವುದೇ ನೆರವಿಲ್ಲದೆ ಕೈಗೊಂಡ ಜಲಯಜ್ಞದಿಂದ ಜಲ ಸಂವರ್ಧನೆ-ಸಂರಕ್ಷಣೆ ಹಾಗೂ ಸ್ವಾವಲಂಬನೆ, ಕೃಷಿ, ಆರ್ಥಿಕ ಹಾಗೂ ಜೀವನಮಟ್ಟದಲ್ಲಾದ ಸುಧಾರಣೆ ಕುರಿತಾಗಿ ಜಗದೀಶ ಮೀನಾ “ಉದಯವಾಣಿ’ಯೊಂದಿಗೆ ಸಂಕಷ್ಟ ಹಾಗೂ ಯಶೋಗಾಥೆ ಬುತ್ತಿ ಬಿಚ್ಚಿಟ್ಟರು. ನಾವು ಅನುಭವಿಸಿದ ಜಲ ಸಂಕಷ್ಟ ನನ್ನೂರಿನ ಕಥೆಯಷ್ಟೇ ಅಲ್ಲ, ಮುಂದೆ ಕರ್ನಾಟಕದ ನಿಮ್ಮೂರಿನ ಕಥೆಯೂ ಆಗಬಹುದು. ಈ ಎಚ್ಚರಿಕೆ ನನ್ನೆಲ್ಲ ದೇಶಬಾಂಧವರಿಗೆ, ರೈತರಿಗೆ ಹೋಗಬೇಕೆಂಬುದೇ ನನ್ನ ಆಶಯ ಎಂದರು.

ಬಗಾನಿಗೆ ಬಾಂದಾರ: ನಮ್ಮೂರಿಗೆ ಹೊಂದಿಕೊಂಡೇ ಬಗಾನಿ ನದಿ ಹರಿಯುತ್ತದೆ. 25 ವರ್ಷಗಳ ಹಿಂದೆ ಈ ನದಿ ಯಾವಾಗ ನೋಡಿದರೂ ಬರಿದಾಗಿಯೇ ಇರುತ್ತಿತ್ತು. ಮಳೆ ಬಂದಾಗ ಕೇವಲ ಎರಡು ತಾಸು ಮಾತ್ರ ನದಿಯಲ್ಲಿ ನೀರು ಕಾಣುತ್ತಿತ್ತು ನಂತರ ಮತ್ತದೇ ಬತ್ತಿದ ಸ್ಥಿತಿ. ಕೆರೆ ಕಟ್ಟೆಗಳು ಒಣಗಿದ್ದವು, ಬಾವಿಗಳು ಬರಿದಾಗಿದ್ದವು. ಅಂತರ್ಜಲವೇ ಇಲ್ಲವಾಗಿ ಕೊಳವೆ ಬಾವಿಗಳು ಕಣ್ಣು ಮುಚ್ಚಿದ್ದವು.

ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ರಾಜಸ್ಥಾನದಲ್ಲಿ ಮಳೆ ಪ್ರಮಾಣ ಕಡಿಮೆ. ಮಳೆ ಬಂದರೆ ಅಷ್ಟಿಷ್ಟು ಬೆಳೆ, ಇಲ್ಲವಾದರೆ ಇಲ್ಲದ ಸ್ಥಿತಿ. ಹೆಚ್ಚಾಗಿ ತಂಬಾಕು ಬೆಳೆಯುತ್ತಿದ್ದೆವು. ವರ್ಷದಿಂದ ವರ್ಷಕ್ಕೆ ಮಳೆ ಹಾಗೂ ನೀರಿನ ಕೊರತೆಯಿಂದ ಬದುಕಿನ ಭವಿಷ್ಯದ ಅಂಧಕಾರ ಕಾಡತೊಡಗಿತ್ತು. ಆಗ ನಮ್ಮ ಪಾಲಿಗೆ ದೀಪವಾಗಿ ಬಂದಿದ್ದು ಜಲತಜ್ಞ ಡಾ| ರಾಜೇಂದ್ರ ಸಿಂಗ್‌ ಹಾಗೂ ಅವರ ತರುಣ ಭಾರತ ಸಂಘ.

ಡಾ| ರಾಜೇಂದ್ರ ಸಿಂಗ್‌ ಅವರು ತೋರಿದ ಜಾಗೃತಿ ಹಾಗೂ ಬದುಕಿನ ಭರವಸೆಯಿಂದಾಗಿ ಗ್ರಾಮಸ್ಥರು ಒಂದಾಗಿ ಜಲಸಂರಕ್ಷಣೆಗೆ ಮುಂದಾದೆವು. ಬಗಾನಿ ನದಿ ನೀರು ಹಿಡಿದಿಡಲು ಬಾಂದಾರ ನಿರ್ಮಾಣ ಕಾಯಕಕ್ಕಿಳಿದೆವು. ತರುಣ ಭಾರತ ಸಂಘದ ಪ್ರೋತ್ಸಾಹ, ಯುವಕರ ಉತ್ಸಾಹದಿಂದಾಗಿ ಸರ್ಕಾರದ ಯಾವುದೇ ನೆರವಿಲ್ಲದೆ, ಗ್ರಾಮಸ್ಥರ ದೇಣಿಗೆ, ಶ್ರಮದಾನದಿಂದಾಗಿ ನೋಡ ನೋಡುತ್ತಿದ್ದಂತೆಯೇ ಬಾಂದಾರ ನಿರ್ಮಾಣಗೊಂಡಿತು. ಇದನ್ನೇ ನಾವು ಬೊಮಿಯಾಜಿ ಬಾಂದಾರ ಎಂದು ಕರೆಯುತ್ತಿದ್ದೇವೆ.

13 ವರ್ಷಗಳಿಂದ ನೀರು ಬತ್ತಿಲ್ಲ: ಬಗಾನಿ ನದಿಗೆ ಬಾಂದಾರ ನಿರ್ಮಾಣ ಕಾರ್ಯಕ್ಕಿಳಿದ ನಾವು ಹಂತ ಹಂತವಾಗಿ 1998ರಲ್ಲಿ ಪೂರ್ಣ ಪ್ರಮಾಣದಲ್ಲಿ ಕೈಗೊಂಡೆವು. ಬಿದ್ದ ನೀರು ತಕ್ಷಣಕ್ಕೆ ಎದ್ದು ಹೋಗದಂತೆ ತಡೆದವು. ನೀವು ನಂಬುತ್ತೀರೋ ಇಲ್ಲವೋ ಕಳೆದ 13 ವರ್ಷಗಳಿಂದ ಈ ಬಾಂದಾರದಲ್ಲಿ ನೀರು ಬತ್ತಿಯೇ ಇಲ್ಲ. ಜನವರಿ ಕೊನೆ ವಾರದಲ್ಲೂ ಸುಮಾರು 35 ಅಡಿಯಷ್ಟು ನೀರು ನಿಂತಿದೆ. ಸುತ್ತಮುತ್ತಲ ಬಾವಿಗಳು ತುಂಬಿವೆ. ಅಂತರ್ಜಲ ಮಟ್ಟ ಉತ್ತಮವಾಗಿಯೇ ಇದೆ.

ನಾವು ಕೇವಲ ಬಾಂದಾರ ನಿರ್ಮಾಣ ಮಾಡಿ ನೀರು ನಿಲ್ಲಿಸಿ ಕೈ ತೊಳೆದುಕೊಳ್ಳಲಿಲ್ಲ. ಸುಮಾರು 5 ಕಿಮೀ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಆಯಾ ಗ್ರಾಮಸ್ಥರು ಸೇರಿ ಅರಣ್ಯ ಬೆಳೆಸುವ ಕಾರ್ಯ ಮಾಡಿದೆವು. ನಾವು ನೆಟ್ಟ ಸಸಿಗಳು ಇಂದು ಮುಗಿಲೆತ್ತರದ ಮರಗಳಾಗಿ ಬೆಳೆದು ನಿಂತಿವೆ. ಅನೇಕ ವನ್ಯ ಪ್ರಾಣಿಗಳಿಗೂ ಆಶ್ರಯವಾಗಿವೆ.

ಹೊಲಗಳಲ್ಲಿ ಕೇವಲ ತಂಬಾಕು ಅಷ್ಟೇ ಅಲ್ಲದೆ ಗೋಧಿ, ಸಾಸಿವೆ, ಜೋಳ, ಶೇಂಗಾ ಇತ್ಯಾದಿ ಬೆಳೆಗಳು ನಳನಳಿಸುತ್ತಿವೆ. ನೀರು ತರಲು ಕಿಮೀಗಟ್ಟಲೆ ಸಾಗಬೇಕಿಲ್ಲ. ಊರೊಳಗಿನ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ದನಕರುಗಳು, ವನ್ಯ ಪ್ರಾಣಿಗಳಿಗೆ ನೀರು-ಹಸಿರಿಗೆ ಬರವಿಲ್ಲ. ಈಗ ಹೇಳಿ ನಾವು ನೀರಿನ ಶ್ರೀಮಂತರು ಹೌದೋ ಅಲ್ಲವೋ? ಹಣದಿಂದ ಹೆಚ್ಚು ಶ್ರೀಮಂತರು ಇಲ್ಲದಿರಬಹುದು. ಆದರೆ, ನೀರಿನ ವಿಚಾರದಲ್ಲಿ ನಾವು ಶ್ರೀಮಂತರಾಗಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎನ್ನುತ್ತಾರೆ ಜಗದೀಶ ಮೀನಾ.

ಪಡೇವಾಲೇ ಆದ್ಮಿ: ಮಂಡಲವಾಸ್‌ ಗ್ರಾಮಕ್ಕೆ ತೆರಳಿ ಜಗದೀಶ ಎಂದು ಯಾರನ್ನಾದರೂ ಕೇಳಿದರೆ ಯಾವ ಜಗದೀಶ ಎಂದು ಪ್ರಶ್ನಿಸುತ್ತಾರೆ. ಆದರೆ ಪಡೇವಾಲೇ ಆದ್ಮಿ ಎಂದು ಹೇಳಿದರೆ ಸಾಕು ಥಟ್ಟನೆ ಜಗದೀಶ ಮೀನಾ ಅವರ ಮನೆಗೆ ಕರೆದೊಯ್ಯುತ್ತಾರೆ. ಕಾರಣ ಇಷ್ಟೆ, ಇಡೀ ಊರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೊದಲ ವ್ಯಕ್ತಿ ಇವರಂತೆ. ನಂತರ ಹೆಚ್ಚಿನ ಓದು ಕೈಗೊಂಡು ತಹಶೀಲ್ದಾರ್‌ ಹುದ್ದೆ ಮಟ್ಟಕ್ಕೂ ಹೋಗಿದ್ದರು ಜಗದೀಶ ಮೀನಾ.

ಆದರೆ, ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಬೇಸತ್ತು ಹುದ್ದೆ ತೊರೆದು ಗ್ರಾಮ ಸೇರಿದ್ದಂತೆ. ಅದಕ್ಕಾಗಿಯೇ ಇಂದಿಗೂ ಅವರನ್ನು ಅಲ್ಲಿನ ಜನ ಗುರುತಿಸುವುದು ಪಡೇವಾಲೇ ಆದ್ಮಿ ಎಂದು. ಅಂದು ಹೆಚ್ಚಿಗೆ ಓದಿದವರು ಯಾರೂ ಇರಲಿಲ್ಲ. ಆದರೆ ಇದೀಗ ನಮ್ಮ ಹುಡುಗರು ಎಂಎ, ಎಂಎಸ್ಸಿ ಸೇರಿದಂತೆ ಇನ್ನಿತರ ಪದವಿ ಶಿಕ್ಷಣ ಪಡೆದಿದ್ದಾರೆ ಎಂಬುದು ಮಂಡಲವಾಸ್‌ ಗ್ರಾಮದ ಅನೇಕರ ಅಭಿಪ್ರಾಯ.

* ಅಮರೇಗೌಡ ಗೋನವಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...