ಮಹಿಳಾ ಕ್ರಿಕೆಟ್‌ನ ಭರವಸೆಯ ಕಿರಣ; ಶಫಾಲಿ ವರ್ಮಾ
Team Udayavani, Jun 11, 2020, 7:45 PM IST
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಅರ್ಧ ಶತಕ ಬಾರಿಸಿದ ಭಾರತದ ಕ್ರೀಡಾಪಟು ಯಾರೆಂದು ಕೇಳಿದರೆ ಬಹುತೇಕರ ಉತ್ತರ ಸಚಿನ್ ತೆಂಡೂಲ್ಕರ್. ನೀವೂ ಹಾಗೆಂದುಕೊಂಡರೆ ಮಾತ್ರ ನಿಮ್ಮ ಉತ್ತರ ತಪ್ಪು. ಈ ಸಾಧನೆ ಮಾಡಿದವರು ಮಹಿಳಾ ಕ್ರಿಕೆಟ್ ಆಟಗಾರ್ತಿ ಶಫಾಲಿ ವರ್ಮಾ.
ತಮ್ಮ 16 ವರ್ಷ 216 ದಿನಗಳ ಪ್ರಾಯದಲ್ಲಿದ್ದ ಸಚಿನ್ ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯಾಟದಲ್ಲಿ 59 ರನ್‌ಗಳನ್ನು ಭಾರಿಸಿದ್ದರು. ಇದಾದ 30 ವರ್ಷಗಳ ಬಳಿಕ ಶಫಾಲಿ ಶರ್ಮಾ ಈ ದಾಖಲೆ ಮುರಿದಿದ್ದು ತಮ್ಮ 15 ವರ್ಷ 285 ದಿನಗಳ ಪ್ರಾಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 73 ರನ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಆದರೆ ಕೇವಲ 18 ದಿನಗಳ ಅಂತರದಲ್ಲಿ ಯುಎಇಯ ಕವಿಶಾ ಎಗೊಡೇಜ್ ಅವರ ದಾಖಲೆ ಮುರಿಯುವ ಅವಕಾಶ ಇವರ ಕೈತಪ್ಪಿತು.
ಕವಿಶಾ ಅವರು ತಮ್ಮ 15 ವರ್ಷ 267 ದಿನಗಳ ಪ್ರಾಯದಲ್ಲಿ ಮಲೇಷ್ಯಾ ವಿರುದ್ಧ 57 ರನ್‌ಗಳನ್ನು ಬಾರಿಸುವ ಮೂಲಕ ದಾಖಲೆ ಮಾಡಿದ್ದರು.
ಜನವರಿ 28, 2003ರಲ್ಲಿ ಜನಿಸಿದ ಶಫಾಲಿ ಶರ್ಮ, 2019ರ ಸೆಪ್ಟೆಂಬರ್ 24ರಂದು ಸೌತ್‌ಆಫ್ರಿಕಾ ವಿರುದ್ಧ ಸೂರತ್‌ನಲ್ಲಿ ನಡೆದ ಟಿಟ್ವೆಂಟಿ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ನ ಮ್ಯಾಜಿಕ್‌ನಿಂದಾಗಿ ಆ ಪಂದ್ಯವನ್ನು ಭಾರತ ಗೆದ್ದಿತ್ತಾದರೂ ನಾಲ್ಕು ಬಾಲ್‌ಗಳನ್ನು ಎದುರಿಸಿದ್ದ ಶಫಾಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು.
ಇದಾದ ಕೆಲ ಸಮಯದಲ್ಲಿಯೇ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದರು.
ಈ ವೇಳೆಗಾಗಲೇ ಆರಂಭಿಕ ಆಟಗಾರರಾಗಿ ತಮ್ಮದೇ ಆದ ಹೆಸರು ಸಂಪಾದಿಸಿದ್ದ ಸ್ಮತಿ ಮಂದಣ್ಣ, ಐಸಿಸಿ ವರ್ಷದ ಮಹಿಳಾ ಕ್ರೀಡಾಪಟುವಾಗಿಯೂ ಹೆಸರು ಪಡೆದಿದ್ದರು. ಶಫಾಲಿ ಶರ್ಮಾ ಇವರಿವರಿಗೆ ಉತ್ತಮ ಜತೆಯಾದರು. ವೆಸ್ಟ್‌ಇಂಡೀಸ್ ವಿರುದ್ಧ ತಮ್ಮ ಮೊದಲ ಟಿಟ್ವೆಂಟಿ ಪಂದ್ಯದಲ್ಲೇ 73 ರನ್ ಬಾರಿಸುವ ಮೂಲಕ ಸ್ಮತಿ ಮಂದಣ್ಣ ಅವರ ಆಟಕ್ಕೆ ಜತೆಯಾಗಿದ್ದರು. ಆರಂಭಿಕ ಆಟಗಾರರಾದ ಇವರ ಜತೆಯಾಟದ 143ರನ್‌ಗಳು ಮಹಿಳಾ ಟಿಟ್ವೆಂಟಿಯಲ್ಲಿ ಹೊಸ ದಾಖಲಾಯಿತು.