ಸೋತ ಡೆಲ್ಲಿ ಕ್ಯಾಪಿಟಲ್ಸ್, ಪ್ಲೇಆಫ್ ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಭರ್ಜರಿಯಾಗಿ ಗೆದ್ದು ಡೆಲ್ಲಿಯನ್ನು ಹೊರದಬ್ಬಿದ ಮುಂಬೈ ಇಂಡಿಯನ್ಸ್
Team Udayavani, May 21, 2022, 11:50 PM IST
ಮುಂಬೈ: ಶನಿವಾರದ ಅತ್ಯಂತ ಮಹತ್ವದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತುಹೋಗಿದೆ. ಅಲ್ಲಿಗೆ ಅದು ಪ್ಲೇಆಫ್ ನಿಂದ ಹೊರಬಿದ್ದಿದೆ. ಇದರ ಪರಿಣಾಮ ಫಾ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಗೇರಿದೆ. ಶನಿವಾರ ಗೆದ್ದ ಮುಂಬೈ ಇಂಡಿಯನ್ಸ್ ತಾನಂತೂ ಮೊದಲೇ ಪ್ಲೇಆಫ್ ನಿಂದ ಹೊರಬಿದ್ದಿತ್ತು. ಅದರೊಂದಿಗೆ ಡೆಲ್ಲಿಯನ್ನೂ ಹೊರದಬ್ಬಿತು. ಈ ಹಿಂದೆ ಚೆನ್ನೈಯನ್ನೂ ಸೋಲಿಸಿ, ಅದನ್ನೂ ಕೂಟದಿಂದ ಹೊರಕ್ಕೆ ಕಳುಹಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟಿಗೆ 159 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದನ್ನು ಬೆನ್ನತ್ತಿದ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಮುಂಬೈ ಪರ ಇಶಾನ್ ಕಿಶನ್ (48), ಡೆವಾಲ್ಡ್ ಬ್ರೆವಿಸ್ (37), ಟಿಮ್ ಡೇವಿಡ್ (34) ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಡೆಲ್ಲಿಯ ಅನ್ರಿಚ್ ನೋರ್ಜೆ, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.
ಡೆಲ್ಲಿ ಸಾಮಾನ್ಯ ಮೊತ್ತ: ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡವು ಆರಂಭದಲ್ಲಿಯೇ ಕುಸಿಯಿತು. ಎರಡು ರನ್ ಅಂತರದಲ್ಲಿ ಸ್ಫೋಟಕ ಖ್ಯಾತಿಯ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಪೃಥ್ವಿ ಶಾ ಔಟಾದ ಕಾರಣ ತಂಡ ಶೋಚನೀಯ ಸ್ಥಿತಿಗೆ ಬಿತ್ತು. 50 ರನ್ ತಲುಪಿದಾಗ ತಂಡದ ಸಫìರಾಜ್ ಖಾನ್ ಔಟಾದರು.
ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ಕಡೆ ಮುಂಬೈ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತಿದ್ದ ನಾಯಕ ರಿಷಭ್ ಪಂತ್, ಆಬಳಿಕ ಪೊವೆಲ್ ಆರನೇ ವಿಕೆಟಿಗೆ 75 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.
ಇದರಿಂದಾಗಿ ತಂಡ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಪಂತ್ 33 ಎಸೆತ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 39 ರನ್ ಹೊಡೆದರೆ, ಪೊವೆಲ್ 34 ಎಸೆತಗಳಿಂದ 1 ಬೌಂಡರಿ ಮತ್ತು 4 ಸಿಕ್ಸರ್ ನೆರವಿಂದ 43 ರನ್ ಗಳಿಸಿ ಬುಮ್ರಾಗೆ ಕ್ಲೀನ್‌ಬೌಲ್ಡ್ ಆದರು.
ಕೊನೆ ಹಂತದಲ್ಲಿ ಅಕ್ಷರ್ ಪಟೇಲ್ ಎರಡು ಸಿಕ್ಸರ್ ಬಾರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ಬಿಗುದಾಳಿ ಸಂಘಟಿಸಿದ ಬುಮ್ರಾ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಹಾರಿಸಿದರೆ ರಮಣ್‌ದೀಪ್ ಸಿಂಗ್ 29 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ 20 ಓವರ್, 159/7 (ಪೊವೆಲ್ 43, ರಿಷಭ್ ಪಂತ್ 39, ಬುಮ್ರಾ 25ಕ್ಕೆ 3). ಮುಂಬೈ 19.1 ಓವರ್, 160/5 (ಇಶಾನ್ ಕಿಶನ್ 48, ಬ್ರೆವಿಸ್ 37, ಅನ್ರಿಚ್ ನೋರ್ಜೆ 37ಕ್ಕೆ 2).
ಆರ್‌ಸಿಬಿ ಮೇಲೇರಲು ಕಾರಣ?
ಒಂದು ವೇಳೆ ಶನಿವಾರ ಡೆಲ್ಲಿ ಗೆದ್ದಿದ್ದರೆ, ಬೆಂಗಳೂರು-ಡೆಲ್ಲಿ ಸರಿಯಾಗಿ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿರುತ್ತಿದ್ದವು. ಆಗ ರನ್‌ದರ ಜಾಸ್ತಿಯಿದ್ದ ಕಾರಣ ಡೆಲ್ಲಿ ಪ್ಲೇಆಫ್ ಗೆರುತ್ತಿತ್ತು. ಡೆಲ್ಲಿ ಸೋತ ಪರಿಣಾಮ ಬೆಂಗಳೂರು ನಿರ್ಣಾಯಕವಾಗಿ ಮುಂದಿನ ಸುತ್ತಿಗೇರಿತು.