ಐಪಿಎಲ್ ಟೈ ಮ್ಯಾಚ್-08: 5 ರನ್ ಗಳಿಸಲಾಗದೆ ಸೂಪರ್ ಓವರ್ ಆಡಿದ ಡೆಲ್ಲಿ!
Team Udayavani, May 17, 2022, 7:39 AM IST
2018ರ ಐಪಿಎಲ್ ಟೈ-ಬ್ರೇಕ್ ಒಂದನ್ನು ಪಡೆದಿತ್ತು. ಆದರೆ ಇದು 2019ರ ಸೀಸನ್‌ನಲ್ಲಿ ಸರಿಹೊಂದಿಕೊಂಡಿತು. ಅಂದು ಎರಡು ಪಂದ್ಯಗಳು ಟೈಯಲ್ಲಿ ಅಂತ್ಯ ಕಂಡವು. ಮೊದಲನೆಯದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ನಡುವಿನ ಮುಖಾಮುಖಿ.
ಇದು ಹೊಸದಿಲ್ಲಿಯ “ಫಿರೋಜ್ ಶಾ ಕೋಟ್ಲಾ’ ಮೈದಾನದಲ್ಲಿ ನಡೆದಿತ್ತು. ಇಲ್ಲಿ ಅಂತಿಮ ಓವರ್‌ನಲ್ಲಿ 5 ರನ್ ಗಳಿಸಲಾಗದೆ ಡೆಲ್ಲಿ ಪರದಾಡಿತು. ಸೂಪರ್ ಓವರ್‌ನಲ್ಲಿ ಗೆದ್ದಿತೆಂಬುದು ಬೇರೆ ಮಾತು.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 8 ವಿಕೆಟಿಗೆ 185 ರನ್ನುಗಳ ಬೃಹತ್ ಮೊತ್ತ ಗಳಿಸಿತು. ಡೆಲ್ಲಿ ಜವಾಬು ಕೂಡ ದಿಟ್ಟ ರೀತಿಯಲ್ಲೇ ಇತ್ತು. ಆರಂಭಕಾರ ಪೃಥ್ವಿ ಶಾ 99, ನಾಯಕ ಶ್ರೇಯಸ್ ಅಯ್ಯರ್ 43 ರನ್ ಬಾರಿಸಿ ಡೆಲ್ಲಿಯನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದ್ದರು. ಒಂದು ಹಂತದಲ್ಲಿ ಎರಡೇ ವಿಕೆಟಿಗೆ 170 ರನ್ ಬಾರಿಸಿ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಕೊನೆಯಲ್ಲಿ ಸಂಭವಿಸಿದ್ದೇ ಬೇರೆ!
ಕುಲದೀಪ್ ಮ್ಯಾಜಿಕ್
18ನೇ ಓವರ್‌ನಿಂದ ದಿಢೀರ್ ಕುಸಿತ ಕಂಡ ಡೆಲ್ಲಿ 3 ವಿಕೆಟ್‌ಗಳನ್ನು ಪಟಪಟನೇ ಕಳೆದುಕೊಂಡಿತು. ಆದರೂ 6 ವಿಕೆಟ್ ನೆರವಿನಿಂದ ಕೊನೆಯ ಓವರ್‌ನಲ್ಲಿ 5 ರನ್ ಗಳಿಸುವುದು ಯಾವ ರೀತಿಯ ಸವಾಲೂ ಆಗಿರಲಿಲ್ಲ. ಆದರೆ ಮಿಸ್ಟರಿ ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್ ಮ್ಯಾಜಿಕ್ ಒಂದನ್ನು ಮಾಡಿಯೇ ಬಿಟ್ಟರು.
ಮೊದಲ ಎಸೆತದಲ್ಲಿ ಹನುಮ ವಿಹಾರಿ ಸಿಂಗಲ್ ತೆಗೆದರು. ಬಳಿಕ ಕಾಲಿನ್ ಇನ್‌ಗ್ರಾಮ್ 2 ರನ್ ಓಡಿದರು. 4 ಎಸೆತ-3 ರನ್ ಎಂಬಲ್ಲಿಗೆ ಲೆಕ್ಕಾಚಾರ ಬಂದು ನಿಂತಿತು.
3ನೇ ಎಸೆತದಲ್ಲಿ ಇನ್‌ಗ್ರಾಮ್ ಗೆ ರನ್ ಗಳಿಸಲಾಗಲಿಲ್ಲ. 4ನೇ ಎಸೆತದಲ್ಲಿ ಒಂದು ರನ್ ಸಿಕ್ಕಿತು. ಡೆಲ್ಲಿಯ ಟಾರ್ಗೆಟ್… 2 ಎಸೆತ, 2 ರನ್.
5ನೇ ಎಸೆತದಲ್ಲಿ ವಿಹಾರಿ ಬಾರಿಸಿದ ಹೊಡೆತ ನೇರವಾಗಿ ಶುಭಮನ್ ಗಿಲ್ ಕೈ ಸೇರಿತು. ಕುಲದೀಪ್ ಪಂದ್ಯವನ್ನು ಅಂತಿಮ ಎಸೆತಕ್ಕೆ ಎಳೆದು ತಂದರು. ಇಲ್ಲಿ ಗೆಲುವಿನ ರನ್ ಗಳಿಸುವ ವೇಳೆ ಎಡವಟ್ಟಾಯಿತು. ಇನ್‌ಗ್ರಾಮ್ ರನ್‌ಟಾದರು. ಪಂದ್ಯ ಟೈ ಆಯಿತು!
ಸೂಪರ್ ಓವರ್
ಕೆಕೆಆರ್ ಪರ ಸೂಪರ್ ಓವರ್ ಎಸೆದವರು ಪ್ರಸಿದ್ಧ್ ಕೃಷ್ಣ. ಡೆಲ್ಲಿ ಒಂದು ವಿಕೆಟಿಗೆ 10 ರನ್ ಬಾರಿಸಿತು.
ಡೆಲ್ಲಿ ಪರ ಕಾಗಿಸೊ ರಬಾಡ ಸೂಪರ್ ಓವರ್‌ಗೆ ಸಜ್ಜಾದರು. ಬ್ಯಾಟರ್ ಆ್ಯಂಡ್ರೆ ರಸೆಲ್ ಮತ್ತು ದಿನೇಶ್ ಕಾರ್ತಿಕ್. ರಸೆಲ್ ಮೊದಲ ಎಸೆತವನ್ನೇ ಬೌಂಡರಿಗೆ ಚಚ್ಚಿದರು. ಮುಂದಿನದು ಡಾಟ್ ಬಾಲ್. ಅನಂತರದ ಯಾರ್ಕರ್ ಎಸೆತಕ್ಕೆ ರಸೆಲ್ ವಿಕೆಟ್ ರಟ್ಟಿತು!
ಕ್ರೀಸ್ ಇಳಿದ ರಾಬಿನ್ ಉತ್ತಪ್ಪ ಒಂದು ರನ್ ತೆಗೆದರು. 5ನೇ ಎಸೆತದಲ್ಲಿ ಕಾರ್ತಿಕ್‌ಗೆ ದಕ್ಕಿದ್ದೂ ಒಂದೇ ರನ್. ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು. ಕನಿಷ್ಠ ಬೌಂಡರಿ ಬಂದರೂ ಕೆಕೆಆರ್‌ಗೆ ಲಾಭ ಆಗುತ್ತಿತ್ತು. ಆದರೆ ಉತ್ತಪ್ಪ ಗಳಿಸಿದ್ದು ಒಂದೇ ರನ್. ಕೈತಪ್ಪಿದ ಗೆಲುವನ್ನು ಡೆಲ್ಲಿ ಕೇವಲ 20 ನಿಮಿಷಗಳಲ್ಲಿ ತನ್ನದಾಗಿಸಿಕೊಂಡಿತು!