CONNECT WITH US  

ಕಣಿ ಕಾಣುವ ಸಂಭ್ರಮದ ಹಬ್ಬ ವಿಷು ಆಚರಣೆ

ಕಾಸರಗೋಡು: ಕಣಿ ಕಾಣುವ ಹಬ್ಬವೆಂದೇ ಖ್ಯಾತಿ ಪಡೆದ ಸೌರಮಾನ ಯುಗಾದಿಯಾದ "ವಿಷು' ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ,  ಭಕ್ತಿ, ಶ್ರದ್ಧೆಯಿಂದ ಬುಧವಾರ ಆಚರಿಸಲಾಯಿತು.  ಎಲ್ಲರಿಗೂ ಆರೋಗ್ಯ ಭಾಗ್ಯ, ಸಂಪತ್ತು,  ಸಮೃದ್ಧಿªಯನ್ನು  ಕರುಣಿಸುವ ವಿಷು ಹಬ್ಬದ ಅಂಗವಾಗಿ ಮನೆ ಮನೆಗಳಲ್ಲಿ, ದೇವ ಸ್ಥಾನ, ಮಂದಿರಗಳಲ್ಲಿ "ಕಣಿ' ದರ್ಶನ ಪಡೆಯಲಾಯಿತು.

ಕುಂಬಳೆ ಸೀಮೆಯ ಅತಿ ಪುರಾತನವೂ ಪ್ರಸಿದ್ಧವೂ ಆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಳ ದಲ್ಲಿ ವಿಷು "ಕಣಿ' ಕಾಣಲು ಸಾವಿರಾರು ಭಕ್ತರು ನೆರೆದಿದ್ದರು. ಮುಂಜಾನೆಯೇ ಮನೆಯಲ್ಲಿ ಕಣಿ ವೀಕ್ಷಿಸಿದ ಬಳಿಕ ಹತ್ತಿರದ ದೇವಸ್ಥಾನಗಳಿಗೆ, ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಮುಂಜಾನೆಯಿಂದಲೇ ವಿವಿಧ ದೇವಸ್ಥಾನ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆದು, ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸಂಬಂಧಿಕರಿಗೆ, ಆಪ್ತರಿಗೆ, ಗೆಳೆಯರಿಗೆ ಶುಭವನ್ನು ಹಾರೈಸಿದರು.

ನಾಡಿನಾದ್ಯಂತ ವಿಷು ಹಬ್ಬದ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯಿತು. ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸತ್ಸಂಗಗಳು, ಧಾರ್ಮಿಕ ಕಾರ್ಯಕ್ರಮ ಗಳು ಜರಗಿದವು
ವಿಷು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ವಿಷು ಹಬ್ಬವನ್ನು ಆಚರಿಸಿದರು. ಇದೇ ಹಬ್ಬ ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ.

ವರುಷದ ಆರಂಭದಲ್ಲಿ ಮೊದಲ ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗು ತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಿ ನವ ಧಾನ್ಯ ಗಳು, ಬಟ್ಟೆಬರೆ, ಬಂಗಾರದ ಆಭರಣ, ಫಲವಸ್ತುಗಳು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆ ಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಿ ಕಣಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲರೂ ಬೆಳಗ್ಗಿನ ಜಾವವೇ ಎದ್ದು, ಮಿಂದು ಹೊಸಬಟ್ಟೆ ಧರಿಸಿ ಗುರುಹಿರಿಯ ರಿಗೆ ವಂದಿಸಿ ಅನಂತರ ಕಣಿ ದರ್ಶನ ಪಡೆದು ಕೃತಾರ್ಥರಾದರು.

ವಿಷು ಕಣಿಯ ವಿಶೇಷ ಬಲಿ 
ಕುಂಬಳೆ ಸೀಮೆಯ ಅತಿ ಪುರಾತನವೂ ಪ್ರಸಿದ್ಧವೂ ಆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಎ. 15ರಂದು ಮುಂಜಾನೆ 5 ಗಂಟೆಗೆ ದೀಪೋತ್ಸವದ ಬಳಿಕ ವಿಷು ಕಣಿಯ ವಿಶೇಷ ಬಲಿ ನಡೆಯಿತು. ವಿಶೇಷ ಬಲಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದರು. ಬಲಿ ಉತ್ಸವದ ಬಳಿಕ ರಾಜಾಂಗಣ ಪ್ರಸಾದ ನಡೆಯಿತು.

Trending videos

Back to Top