CONNECT WITH US  

ಅನ್ವೇಷಣೆ ಪ್ರಕಾಶನಕ್ಕೆ  ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2015ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ "ಅನ್ವೇಷಣೆ ಪ್ರಕಾಶನ' ಸಂಸ್ಥೆ ಭಾಜನವಾಗಿದೆ.  ಅದೇ ರೀತಿ ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಬಳ್ಳಾರಿಯ ಡಾ.ಬಿ.ಶೇಷಾದ್ರಿ ಹಾಗೂ ಡಾ.ಜಿ.ಪಿ.ರಾಜರತ್ನಂ
ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ದಾವಣಗೆರೆಯ ಶಶಿಕಲಾ ಬೆಳಗಲಿ ಆಯ್ಕೆಯಾಗಿದ್ದಾರೆ.

ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ
ಜಯಪ್ರಕಾಶ್‌, 2015ನೇ ಸಾಲಿನ ಅತ್ಯುತ್ತಮ ಪ್ರಕಾಶನ, ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ, ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಡಾ.ಅನುಪಮ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ
ಪ್ರಶಸ್ತಿ, ಕನ್ನಡ ಪುಸ್ತಕ ಸೊಗಸು ಬಹುಮಾನ ಹಾಗೂ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹಧನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದರು.

ಕಳೆದ ಮೂರು ದಶಕಗಳಿಂದ ಪ್ರಕಾಶನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅನ್ವೇಷಣೆ ಪ್ರಕಾಶನ ಸಂಸ್ಥೆಯು ಕಳೆದ ವರ್ಷ ಸಾಹಿತ್ಯದ ಎಲ್ಲ ಪ್ರಕಾರಗಳ ಕೃತಿಗಳನ್ನು ಪ್ರಕಟಿಸಿದ್ದು, ಸಂಸ್ಥೆಯ ಈ ಸಾಧನೆಯನ್ನು ಗುರುತಿಸಿ 2015ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಹೊಂದಿರುತ್ತದೆ.
ಅದೇ ರೀತಿ ಡಿ.ಎಂ.ನಂಜುಂಡಪ್ಪ ವರದಿ ಸಮಿತಿಯ ಸದಸ್ಯರಾಗಿ ಹಿಂದುಳಿದ ತಾಲೂಕುಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹಾಗೂ ಹಲವು ವಿಚಾರ ಸಂಕಿರಣಗಳಲ್ಲಿ ವಿವಿಧ ವಿಷಯಗಳ ಬಗ್ಗೆ 50ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿರುವ ಡಾ.ಬಿ.ಶೇಷಾದ್ರಿಯವರಿಗೆ 75 ಸಾವಿರ ರೂ. ನಗದು ಹೊಂದಿರುವ ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಸಾಹಿತ್ಯ ಪರಿಚಾರಿಕೆ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ನೀಡಲಾಗುವ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ
ಪ್ರಶಸ್ತಿಗೆ ಶಶಿಕಲಾ ಬೆಳಗಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯ 50 ಸಾವಿರ ನಗದು ಹೊಂದಿದೆ. ಶಶಿಕಲಾ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಪುಸ್ತಕ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಆ್ಯಸಿಡ್‌ ದಾಳಿ ನಿಯಂತ್ರಣ ಅಭಿಯಾನ, ಆಂತರ್ಜಾತಿ ವಿವಾಹ ವೇದಿಕೆಯಲ್ಲಿ ಸಕ್ರಿಯರಾಗಿದ್ದಾರೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ನೀಡುವ 25 ಸಾವಿರ ರೂ. ಮೊತ್ತದ ಡಾ.ಅನುಮಪ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಡಾ.ಎಸ್‌.ಪಿ.ಯೋಗಣ್ಣ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ರೋಗಗಳ ಸ್ಥೂಲ ಪರಿಚಯ, ದುಶ್ಚಟಗಳು ಮತ್ತು ಪರಿಣಾಮಗಳು, ಹೃದಯಾಘಾತ, ಅಸ್ತಮಾ, ಆರೋಗ್ಯ ದರ್ಶನ ಎಂಬ ಹಲವು ಕೃತಿಗಳನ್ನು ನಾಗಣ್ಣ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಸೊಗಸು ಬಹುಮಾನ: ಪುಸ್ತಕ ಸೊಗಸು ಪ್ರಥಮ ಬಹುಮಾನ- ಬೆಂಗಳೂರಿನ ಎಂ.ಎಂ.ಪಬ್ಲಿಕೇಷನ್‌ನ "ಅನುರಕ್ತಿ' ಕೃತಿ. ದ್ವಿತೀಯ ಬಹುಮಾನ- ಬಳ್ಳಾರಿ ಪಲ್ಲವ ಪ್ರಕಾಶನದ "ಪ್ರೀತಿ ಎಂಬುದು ಚಂದ್ರನ ದಯೆ' ಕೃತಿ, ತೃತೀಯ ಬಹುಮಾನ- ಬೆಂಗಳೂರಿನ ಅನಿಕೇತನ ಪ್ರಕಾಶನದ "ಅಸ್ಮಿತಾ' ಕೃತಿಗೆ ಸಿಕ್ಕಿದೆ. ಮಕ್ಕಳ ಪುಸ್ತಕ ಸೊಬಗು ಬಹುಮಾನ ಕೋಲಾರ ಅನನ್ಯ ಪ್ರಕಾಶನದ "ಮತ್ತೂಂದು ಮಹಾಭಾರತ' ಕೃತಿಗೆ ನೀಡಲಾಗಿದೆ. ಮುಖಪುಟ ಚಿತ್ರ ವಿನ್ಯಾಸ ವಿಭಾಗದಲ್ಲಿ "ಬಿಡಿ ಮುತ್ತು' ಕೃತಿಯ ಮುಖಪುಟ ವಿನ್ಯಾಸಕ್ಕೆ ಕಲಾವಿದ ಯು.ಟಿ.ಸುರೇಶ್‌ಗೆ ಮೊದಲ ಹಾಗೂ "ಪೇಶೆಂಟ್‌ ಪಾರ್ಕಿಮಗ್‌' ಕೃತಿಯ ಮುಖಪುಟ ವಿನ್ಯಾಸಕ್ಕೆ ಸುಧಾಕರ್‌ ದರ್ಬೆ ಅವರಿಗೆ ಎರಡನೇ ಬಹುಮಾನ ಸಿಕ್ಕಿದೆ.

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ
ಪ್ರಾಧಿಕಾರದ ವತಿಯಿಂದ ಯುವ ಬರಹಗಾರರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ಯೋಜನೆಯಡಿ 35 ವರ್ಷದೊಳಗಿನ ಲೇಖಕರು ತಮ್ಮ ಮೊದಲ ಕೃತಿಯ ಮುದ್ರಣ ಮಾಡಿಸುವುದಕ್ಕೆ ಪ್ರೋತ್ಸಾಹಧನ ನೀಡಲು 25 ಯುವ ಬರಹಗಾರರನ್ನು ಆಯ್ಕೆ ಮಾಡಿದ್ದು, ತಲಾ 15 ಸಾವಿರರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಬಂಜಗೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Trending videos

Back to Top