CONNECT WITH US  

ಸತ್ಯಂ ರಾಜುಗೆ 7 ವರ್ಷ ಜೈಲು: ಸಿಬಿಐ ವಿಶೇಷ ನ್ಯಾಯಾಲಯ

ಹೈದರಾಬಾದ್‌: ಆರು ವರ್ಷಗಳ ಹಿಂದೆ ದೇಶದ ಕಾರ್ಪೊರೆಟ್‌ ಕ್ಷೇತ್ರವನ್ನು ತಲ್ಲಣಗೊಳಿಸಿದ್ದ ಭಾರತ ಕಂಡ ಅತ್ಯಂತ ಬೃಹತ್‌ ಲೆಕ್ಕಪತ್ರ ಹಗರಣವಾದ ಸತ್ಯಂ ಕಂಪ್ಯೂಟರ್ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದ್ದು, ಆ ಕಂಪನಿಯ ಸಂಸ್ಥಾಪಕ ರಾಮಲಿಂಗ ರಾಜು ಹಾಗೂ ಅವರ ಸೋದರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮರಾಜು ಮತ್ತು ಇತರೆ 8 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಇದೇ ವೇಳೆ, ಈ ಸೋದರರಿಗೆ ಬರೋಬ್ಬರಿ 5.5 ಕೋಟಿ ರೂ. ದಂಡ ಹೇರಿದೆ. ಇನ್ನಿತರೆ 8 ಅಪರಾಧಿಗಳಿಗೆ ತಲಾ 25 ಲಕ್ಷ ರೂ. ದಂಡ ವಿಧಿಸಲಾಗಿದೆ.

ಈಗಾಗಲೇ 32 ತಿಂಗಳುಗಳನ್ನು ರಾಮಲಿಂಗ ರಾಜು ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ ಇನ್ನೂ 52 ತಿಂಗಳುಗಳನ್ನು ಅವರು ಕಾರಾಗೃಹದಲ್ಲಿ ಸವೆಸಬೇಕಿದೆ. ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ರಾಮಲಿಂಗ ರಾಜು ಹಾಗೂ ಇತರೆ 9 ಅಪರಾಧಿಗಳನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದು, ಜೈಲಿಗೆ ಕಳುಹಿಸಿದ್ದಾರೆ.

ಹೂಡಿಕೆದಾರರು 14000 ಕೋಟಿ ರೂ. ಹಣ ಕಳೆದುಕೊಳ್ಳುವಂತೆ ಮಾಡಿದ 7 ಸಾವಿರ ಕೋಟಿ ರೂ. ಮೊತ್ತದ ಈ ವಂಚನೆ ಪ್ರಕರಣದಲ್ಲಿ ರಾಮಲಿಂಗರಾಜು ಹಾಗೂ ಇತರರು ದೋಷಿ ಎಂದು ಗುರುವಾರ ಬೆಳಗ್ಗೆ ನ್ಯಾಯಾಲಯ ತೀರ್ಪು ನೀಡಿತು. ರಾಜು ಅವರು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಾಕಷ್ಟು ಸಾಮಾಜಿಕ ಕಾರ್ಯ ನಡೆಸಿರುವ ಹಿನ್ನೆಲೆಯಲ್ಲಿ ಕಡಿಮೆ ಶಿಕ್ಷೆ ವಿಧಿಸುವಂತೆ ಮತ್ತು ಶಿಕ್ಷೆ ಕುರಿತ ವಿಚಾರಣೆ ವೇಳೆ ಅವರ ಪರ ವಕೀಲರು ಮನವಿ ಮಾಡಿದರು.

ಸತ್ಯಂ ಲೆಕ್ಕ ಸುಳ್ಳು: ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ಈ ವಿಚಾರವನ್ನು 2009ರ ಜ.7ರಂದು ಸ್ವತಃ ರಾಮಲಿಂಗರಾಜು ಒಪ್ಪಿಕೊಳ್ಳುವುದರೊಂದಿಗೆ ಹಗರಣ ಬೆಳಕಿಗೆ ಬಂದಿತ್ತು. ಬಳಿಕ ಆಂಧ್ರಪ್ರದೇಶ ಸಿಐಡಿ ರಾಮಲಿಂಗರಾಜು, ಅವರ ಸೋದರ ರಾಮರಾಜು ಹಾಗೂ ಇತರರನ್ನು ಬಂಧಿಸಿತ್ತು. 2009ರ ಫೆಬ್ರವರಿಯಲ್ಲಿ ಈ ಪ್ರಕರಣ ಸಿಬಿಐಗೆ ಹಸ್ತಾಂತರಗೊಂಡಿತ್ತು.

2009ರ ಏ.7, ನ.24 ಹಾಗೂ 2010ರ ಜ.7ರಂದು ಸಿಬಿಐ ಒಟ್ಟು ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿತ್ತು. 7 ಸಾವಿರ ಕೋಟಿ ರೂ. ಮೊತ್ತದ ಲೆಕ್ಕ ಪತ್ರ ವಂಚನೆಯಿಂದ ಸತ್ಯಂ ಕಂಪನಿಯ ಹೂಡಿಕೆದಾರರರಿಗೆ 14 ಸಾವಿರ ಕೋಟಿ ರೂ. ನಷ್ಟವಾಗಿದೆ. ರಾಜು ಸೋದರರಿಗೆ ಅಕ್ರಮವಾಗಿ 1900 ಕೋಟಿ ರೂ. ಲಾಭವಾಗಿದೆ ಎಂದು ವಿಚಾರಣೆ ವೇಳೆ ಸಿಬಿಐ ದೂಷಿಸಿತ್ತು. ಆರು ವರ್ಷಗಳ ಕಾಲ ವಿಚಾರಣೆ ನಡೆದು ಸಿಬಿಐ ವಿಶೇಷ ನ್ಯಾಯಾಧೀಶ ಬಿ.ವಿ.ಎಲ್‌.ಎನ್‌. ಚಕ್ರವರ್ತಿ ಅವರು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದರು.

ರಾಮಲಿಂಗರಾಜು, ರಾಮರಾಜು ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 5.5 ಕೋಟಿ ರೂ. ದಂಡ ವಿಧಿಸಿದರು. ಇತರೆ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್‌, ಪಿಡಬ್ಲ್ಯುಸಿ ಕಂಪನಿಯ ಮಾಜಿ ಆಡಿಟರ್‌ಗಳಾದ ಸುಬ್ರಮಣಿ ಗೋಪಾಲಕೃಷ್ಣನ್‌, ಟಿ. ಶ್ರೀನಿವಾಸ್‌, ರಾಜು ಅವರ ಮತ್ತೂಬ್ಬ ಸೋದರ ಸೂರ್ಯನಾರಾಯಣ ರಾಜು, ಮಾಜಿ ನೌಕರರಾದ ಜಿ. ರಾಮಕೃಷ್ಣ, ಡಿ. ವೆಂಕಟಪತಿ ರಾಜು, ಶ್ರೀಶೈಲಂ, ಸತ್ಯಂ ಕಂಪನಿಯ ಮಾಜಿ ಆಂತರಿಕ ಮುಖ್ಯ ಆಡಿಟರ್‌ ವಿ.ಎಸ್‌. ಪ್ರಭಾಕರ ಗುಪ್ತಾ ಅವರಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ತಲಾ 25 ಲಕ್ಷ ರೂ. ದಂಡ ವಿಧಿಸಿತು.

ಏನಿದು ಸತ್ಯಂ ಕಂಪ್ಯೂಟರ್ ಹಗರಣ?

ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ಈ ವಿಚಾರವನ್ನು 2009ರ ಜ.7ರಂದು ಸ್ವತಃ ರಾಮಲಿಂಗರಾಜು ಒಪ್ಪಿಕೊಳ್ಳುವುದರೊಂದಿಗೆ ಹಗರಣ ಬೆಳಕಿಗೆ ಬಂದಿತ್ತು. ಹಗರಣದ ಬಳಿಕ ಸತ್ಯಂ ಕಂಪನಿಯನ್ನು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿ ಮಾಲೀಕತ್ವದ ಟೆಕ್‌ ಮಹೀಂದ್ರಾ ಕಂಪನಿ 2009ರ ಏಪ್ರಿಲ್‌ನಲ್ಲಿ ಖರೀದಿಸಿತ್ತು.

ಇತರೆ 9 ಅಪರಾಧಿಗಳಿಗೂ 7 ವರ್ಷ ಕಾರಾಗೃಹ ವಾಸ

8 ಮಂದಿಗೆ 25 ಲಕ್ಷ ದಂಡ, ರಾಜು ಸೋದರ ರಾಮರಾಜುಗೂ 5.5 ಕೋಟಿ ರೂಪಾಯಿ ಜುಲ್ಮಾನೆ

ಹೂಡಿಕೆದಾರರಿಗೆ 14000 ಕೋಟಿ ನಷ್ಟ ಮಾಡಿದ್ದ ಪ್ರಕರಣ

7000 ಕೋಟಿ ಸುಳ್ಳು ಲೆಕ್ಕ ತೋರಿಸಿದ್ದ ರಾಜು

ರಾಮಲಿಂಗರಾಜು ಇನ್ನೂ 52 ತಿಂಗಳನ್ನು ಜೈಲಲ್ಲಿ ಕಳೆಯಬೇಕು

 

Trending videos

Back to Top