CONNECT WITH US  

ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ

ಮೂಡಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಪುನರೂರು ವಾಸುದೇವ ರಾವ್‌ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಕೊಡಮಾಡಿದ 2014ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸಾಹಿತಿ ಡಾ| ಜಯಪ್ರಕಾಶ ಮಾವಿನಕುಳಿ ಅವರಿಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರದಾನ ಮಾಡಿದರು.

ಮಾವಿನಕುಳಿ ಅವರ "ಕಾಲಯಾನ' ಕವನ ಸಂಕಲನವು 10,000 ರೂ. ನಗದು, ತಾಮ್ರಫಲಕ ಸಹಿತ ಪ್ರಶಸ್ತಿ ಗೆದ್ದಿದೆ.

ಕಾಂತಾವರ ಕನ್ನಡ ಸಂಘದ ವತಿಯಿಂದ ರವಿವಾರ ಕಾಂತಾವರ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಾವಿನಕುಳಿ ಅವರು, "ಕಾವ್ಯ ಕಟ್ಟುವುದಲ್ಲ; ಹುಟ್ಟುವುದು. ಅದು ಗದ್ಯದಂತೆ ಸುಲಭವಲ್ಲ, ಅಂತರಂಗದ ಭಾವನೆಗಳು ಪುಟಿದಾಗ ಹೊಳೆವ ಸಾಲುಗಳನ್ನೇ ಹಿಡಿದಿಟ್ಟುಕೊಂಡಾಗ ಕಾವ್ಯವನ್ನಾಗಿಸಬೇಕು' ಎಂದರು.

ಕರ್ಣಾಟಕ ಬ್ಯಾಂಕ್‌ನ ಸಿಜಿಎಂ ಎಂ.ಎಸ್‌. ಮಹಾಬಲೇಶ್ವರ ಭಟ್‌ ಸರ್ವಾಧ್ಯಕ್ಷತೆಯಲ್ಲಿ ಮುದ್ದಣ ಸಾಹಿತ್ಯೋತ್ಸವ ಸಮಾರಂಭದ ನಡೆಯಿತು.

ಮುದ್ದಣ ಕಾವ್ಯ ಪ್ರಶಸ್ತಿ ಪಡೆದ 40 ಕವಿಗಳ ಆಯ್ದ ಕವನ ಸಂಗ್ರಹ 'ಕಾವ್ಯ ನಮಸ್ಕಾರ' ಸಂಪುಟದ ಸಂಪಾದಕ ಡಾ| ವಸಂತ ಕುಮಾರ ಪೆರ್ಲ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ| ಶ್ಯಾಮಸುಂದರ ಬಿದರಕುಂದಿ, ಮಂಗಳೂರು ಐಜಿಪಿ ಕಚೇರಿಯ ಪೊಲೀಸ್‌ ಉಪಾಧಿಧೀಕ್ಷಕ ಡಾ| ವೆಂಕಟೇಶ ಪ್ರಸನ್ನ, ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಬಿ. ಜನಾರ್ದನ ಭಟ್‌, ಸಿ.ಕೆ. ಪಡಿವಾಳ್‌ ಉಪಸ್ಥಿತರಿದ್ದರು.

ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ| ನಾ. ಮೊಗಸಾಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಹಾಗೂ ಸರೋಜಿನಿ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು. ಬಿ. ಮಂಜುನಾಥ ಶೆಟ್ಟಿ ವಂದಿಸಿದರು.

ಗಾಯಕ ಉಡುಪಿಯ ಶಂಕರದಾಸ್‌ ಚೆಂಡ್ಕಳರಿಂದ ಬೇಂದ್ರೆ ಕಾವ್ಯಗಾಯನ, ಡಾ| ಶ್ಯಾಮಸುಂದರ ಬಿದರಕುಂದಿ ಅವರಿಂದ ಬೇಂದ್ರೆ ಕಾವ್ಯದ ಹೊಸ ಓದು ಕುರಿತ ಉಪನ್ಯಾಸ ನಡೆಯಿತು.

ಭೈರಪ್ಪ ಪರ ನಿಂತ ಬಿದರಕುಂದಿ

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳದಲ್ಲಿ ಸಾಹಿತಿಗಳು ಭೈರಪ್ಪ ವಿರುದ್ಧ ವಾಗ್ಧಾಳಿ ನಡೆಸಿರುವುದನ್ನು ಖಂಡಿಸಿದ ಶ್ಯಾಮಸುಂದರ ಬಿದರಕುಂದಿ ಸಾಹಿತಿಗಳು ಸಾರ್ವಜನಿಕವಾಗಿ ಇಂಥ ವರ್ತನೆ ತೋರಿದರೆ ಸಾಹಿತಿಗಳ ಬಗ್ಗೆ ಜನರು ಕೆಟ್ಟ ಅಭಿಪ್ರಾಯ ತಳೆಯುವಂತಾಗುತ್ತದೆ ಎಂದು ಭೈರಪ್ಪನವರ ಪರವಾಗಿ ಮಾತನಾಡಿದರು.

Trending videos

Back to Top