CONNECT WITH US  

ಅವಧಿ ಪೂರ್ವ/ಕಡಿಮೆ ತೂಕದಲ್ಲಿ ಜನಿಸಿದ ಶಿಶುಗಳ ಲಾಲನೆ-ಪಾಲನೆ

ಮುಖ್ಯವಾಗಿ ಉಸಿರಾಟದ ತೊಂದರೆ, ಶಾಖ ಕಾಪಾಡುವ ಕೊರತೆ ಹಾಗೂ ಹಾಲು ನೀಡುವಲ್ಲಿ ತೊಂದರೆಗಳನ್ನು ನಿವಾರಿಸಲು ಈ ಶಿಶುಗಳಿಗೆ ನವಜಾತ ನಿಗಾ ಘಟಕದ ದಾಖಲಾತಿಯ ಆವಶ್ಯಕತೆ ಇರುವುದು.

1. ಉಸಿರಾಟದ ತೊಂದರೆ
ಶ್ವಾಸಕೋಶದಲ್ಲಿ ಸಫ‚‌ìಕ್ಟಾಂಟ್‌ ಎಂಬ ಅಂಶದ ಕೊರತೆಯಿಂದ ಉಸಿರಾಟದ ತೊಂದರೆಯು ಉಂಟಾಗುವುದರಿಂದ, ಇದನ್ನು ನೀಗಿಸಲು ಸಫ‚‌ìಕ್ಟಾಂಟನ್ನು ಶ್ವಾಸಕೋಶಕ್ಕೆ ನಾಳದ ಮೂಲಕ ನೀಡಬೇಕಾಗಬಹುದು, ಅಲ್ಲದೆ ಸ್ವಲ್ಪ ಸಮಯ ಕೃತಕ ಉಸಿರಾಟದ ಅಗತ್ಯವೂ ಬರ‌ಬಹುದು.  

2. ದೇಹದ ಶಾಖ ಕಾಪಾಡುವ ಕೊರತೆ 
ಈ ಶಿಶುಗಳಲ್ಲಿ  ದೇಹದ ಶಾಖವನ್ನು ಕಾಪಾಡಿಕೊಳ್ಳುವಂತಹ ಕೊಬ್ಬಿನಂಶವು ಕಡಿಮೆ ಇದ್ದು ತಾಯಿಯ ಗರ್ಭದಲ್ಲಿ 37 ಡಿಗ್ರಿ ತಾಪದಲ್ಲಿ ಬೆಚ್ಚಗಿದ್ದ ಭ್ರೂಣವು ಹೊರಬಂದ ಬಳಿಕ 25 ರಿಂದ 27 ಡಿಗ್ರಿ ತಾಪಮಾನೊಕ್ಕೊಳಗಾಗುವುದು, ಈ ಸಮಯದಲ್ಲಿನ ಶಿಶುವಿನ  ಶಾಖ ಕಾಪಾಡುವ ಕೊರತೆಯನ್ನು ನೀಗಿಸಲು ಶಾಖ ಕಾಪಾಡುವ ಯಂತ್ರಗಳಾದ ಶಾಖಪೆಟ್ಟಿಗೆ(ಇನುR$Âಬೇಟರ್‌) ಹಾಗು ಶಾಖಸಾಧನಗಳನ್ನು ಉಪಯೋಗಿಸ ಬೇಕಾಗುತ್ತದೆ, ಹಾಗು ಇದರೊಂದಿಗೆ ಅತ್ಯುತ್ತಮ ಕ್ರಮವಾದ ಕಾಂಗರೂ ಆರೈಕೆಯನ್ನು ನೀಡುವುದು ಅಲ್ಲದೆ ಬೆಚ್ಚಗಿನ ಬಟ್ಟೆಯಿಂದ ಸುತ್ತುವುದು ಮೊದಲಾದ ವಿಧಾನದಿಂದ ಶಿಶುವಿನ ಶರೀರದ ಶಾಖವನ್ನು ಕಾಪಾಡಿಕೊಳ್ಳಬಹುದು. 

ಕಾಂಗರೂ ಆರೈಕೆ ಅಂದರೆ ತಾಯಿ ಅಥವಾ ತಂದೆ, ಅಜ್ಜ, ಅಜ್ಜಿ, ಇನ್ಯಾರಾದರೂ ತಯಾರಿದ್ದಲ್ಲಿ ಅವರ ಎದೆಯ ಮೇಲೆ ಶಿಶುವನ್ನು ಇಟ್ಟು ಚೆನ್ನಾಗಿ ಬಟ್ಟೆಯಿಂದ ಸುತ್ತಿಕೊಂಡು ಕನಿಷ್ಠ ಒಂದು ಗಂಟೆ ಅಥವಾ ಇಪ್ಪತ್ನಾಲ್ಕು ಗಂಟೆಯವರೆಗೆ ಅದೇ ಭಂಗಿಯಲ್ಲಿ ಬೆಚ್ಚಗಾಗಿ ಇರಿಸಿಕೊಳ್ಳುವುದು. ಇದು ದೇಹದ ಶಾಖವನ್ನು ಕಾಪಾಡಲು ಸಹಕಾರಿಯಲ್ಲದೆ, ಉಸಿರಾಟವನ್ನು ನಿಯಂತ್ರಿಸಿಕೊಳ್ಳಲು, ಸೋಂಕಿನಿಂದ ರಕ್ಷಿಸಲು, ಮೆದುಳಿನ ಬೆಳವಣಿಗೆಗೆ, ಹಾಗೂ ದೈಹಿಕ ಬೆಳವಣಿಗೆಯೊಂದಿಗೆ ಆಸ್ಪತ್ರೆಯಿಂದ ಶಿಶುವನ್ನು ಬೇಗನೆ ಡಿಸಾcರ್ಜ್‌ ಮಾಡಲೂ ಅನುಕೂಲವಾಗುವುದೆಂದು ವೈದ್ಯಕೀಯ ಸಂಶೋಧನೆಯಿಂದ ತಿಳಿದು ಬಂದಿದೆ.

3. ಪೌಷ್ಟಿಕತೆಯನ್ನು  ಕಾಪಾಡುವ ತೊಂದರೆ
ಈ ಶಿಶುಗಳ ಚೀಪುವ ಹಾಗೂ ನುಂಗುವ ಕ್ರಿಯೆಯು ಸಮರ್ಪಕವಾಗಿರುವುದಿಲ್ಲ  ಹಾಗೂ ಕರುಳು ಬೆಳವಣಿಗೆ ಹೊಂದಿರುವುದಿಲ್ಲ.  ಮುಖ್ಯವಾಗಿ ಮೂವತ್ತರೆಡರಿಂದ ಮೂವತ್ನನಾಲ್ಕು ವಾರಗಳ ಮೊದಲು ಜನನವಾದ ಶಿಶುಗಳಿಗೆ, ನಳಿಕೆಯ ಮೂಲಕ ಎದೆ ಹಾಲು ನೀಡಬೇಕಾಗುವುದು. ಇಲ್ಲವೇ ಇನ್ನೂ ಎಳೆವಯಸ್ಸಿನ ಶಿಶುಗಳಿಗೆ ರಕ್ತನಾಳದ ಮೂಲಕ ಗ್ಲೂಕೋಸ್‌ ಹಾಗೂ ಇತರ ಪೋಷಕಾಂಶಗಳನ್ನು ನೀಡಬೇಕಾಗಬಹುದು. ಅಲ್ಲದೆ ಈ ಸಮಯದಲ್ಲಿ ಎದೆಹಾಲನ್ನು ಸಣ್ಣ ಪ್ರಮಾಣದಲ್ಲಿ ಶಿಶುವಿಗೆ ನೀಡುತ್ತಿದ್ದು , ಶಿಶುವು ಜೀರ್ಣಿಸಿಕೊಂಡ ಹಾಗೆ ಕ್ರಮೇಣ ಜಾಸ್ತಿ ಮಾಡುತ್ತಾ ಶಿಶುವು ಪೂರ್ತಿ ಹಾಲನ್ನು (ಸಾಮಾನ್ಯವಾಗಿ ಪ್ರತೀ ಕಿಲೋ ಗ್ರಾಂ ತೂಕಕ್ಕೆ 150 ಮಿಲಿ ಲೀಟರಿನಷ್ಟು) ಜೀರ್ಣಿಸಿಕೊಳ್ಳಲು ತಯಾರಾಗುವಾಗ ರಕ್ತನಾಳದ ಮುಖಾಂತರ ನೀಡುವ ಪೌಷ್ಟಿಕ ಆಹಾರವನ್ನು ನಿಲ್ಲಿಸಿ, ಒಂದು ಸಲ ಶಿಶುವಿನ ನುಂಗುವ ಹಾಗೂ ಚೀಪುವ ಕ್ರಿಯೆಯು ಉಸಿರಾಟದೊಂದಿಗೆ ಸಮರ್ಪಕವಾಗಿ ಏರ್ಪಟ್ಟಲ್ಲಿ (ಸಾಧಾರಣವಾಗಿ ಮೂವತ್ತನಾಲ್ಕನೇ ವಾರದ ಸಮಯದಲ್ಲಿ) ಎದೆ ಹಾಲು ನೀಡಲು ಪ್ರಯತ್ನಿಸಲಾಗುವುದು. 

4. ಪಿತ್ತ ಕಾಮಾಲೆಯ ತೊಂದರೆ
ಈ ಶಿಶುಗಳ ಯಕೃತ್‌  ಬೆಳವಣಿಗೆ ಹೊಂದಿರದ ಕಾರಣ ಹಾಗೂ ಸಮರ್ಪಕ ರಕ್ತ ಕಣಗಳ ಜೀವಾವಧಿಯು ಕಡಿಮೆಯಿದ್ದು , ಜನನವಾದ 48 ರಿಂದ 72 ಘಂಟೆಗಳ ಅವಧಿಯಲ್ಲಿ ಪಿತ್ತ ಕಾಮಾಲೆಯ ಅಂಶವು ರಕ್ತದಲ್ಲಿ ಹೆಚ್ಚಾಗುತ್ತಾ ಹೋಗುವುದು. ಇದು ದೇಹದಲ್ಲಿ ಹೆಚ್ಚಾಗುತ್ತಾ ಹೋದಲ್ಲಿ ಬಹಳ ಅಪಾಯಕಾರಿ. ಇದಕ್ಕೆ  ಫೊಟೋತೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ.                                         
ಈ ಚಿಕಿತ್ಸೆ ನೀಡುವಾಗ ಮಗುವಿನ ಕಣ್ಣನ್ನು ಮುಚ್ಚಿಡಬೇಕಾಗುವುದು ಯಾಕೆಂದರೆ ಆ ಫೋಟೋತೆರಪಿಯ ಕಿರಣ ಕಣ್ಣಿಗೆ ಒಳ್ಳೆಯದಲ್ಲ.

ಇದಲ್ಲದೆ ಫೋಟೋತೆರಪಿಯ ಬೆಳಕಿನಡಿ ಇಟ್ಟ ಮಗುವಿನ ತಾಪಮಾನ ಏರು ಪೇರಾಗದಂತೆ ನೋಡಿಕೊಳ್ಳುತ್ತಾರೆ ಹಾಗೂ ಶಿಶುವಿಗೆ ನಿರ್ಜಲತೆಗೆ  ಆಗದ ಹಾಗೆ ಶಿಶುವಿನ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು, ಸಮಯಕ್ಕೆ ಸರಿಯಾಗಿ ಶಿಶುವಿನ ರಕ್ತನಾಳಗಳ ಮೂಲಕ ಅಥವಾ ಬಾಯಿಯ ಮುಖಾಂತರ ಪೌಷ್ಟಿಕತೆಯನ್ನು  ನೀಡಿ ಶಿಶುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲಾಗುವುದು. ಇದರೊಂದಿಗೆ ರಕ್ತದಲ್ಲಿ ಪಿತ್ತ ಕಾಮಾಲೆಯ ಅಂಶವನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಲಾಗುವುದು. 

5. ಸೋಂಕು ತಗಲುವ ಭೀತಿ 
ಅವಧಿ ಪೂರ್ವ ಜನಿಸಿದ ಶಿಶುವಿನಲ್ಲಿ ರೋಗ ನಿರೋಧಕ ಅಂಶವೂ ಕಡಿಮೆಯಿದ್ದು , ಸೋಂಕು ತಗಲುವ ಸಂಭವ ಜಾಸ್ತಿ, ಇದರಿಂದ ಹೆರಿಗೆ ಕೋಣೆ, ನವಜಾತ ಶಿಶು ಘಟಕ ಹಾಗೂ ಶಿಶುವನ್ನು ಆರೈಕೆ ನೀಡುವ ಜಾಗದಲ್ಲಿ ಅತ್ಯಂತ ಸ್ವತ್ಛತೆಯನ್ನು ಕಾಪಾಡುವುದು ಬಹಳ ಮುಖ್ಯ ಅಂಶವಾಗಿದೆ. ಈ ಕಾರಣಕ್ಕೆ ಹೆರಿಗೆ ಕೋಣೆ, ನವಜಾತ ಶಿಶು ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂದರ್ಶಿಸುವುದನ್ನು ನಿಷೇಧಿಸಿರುತ್ತಾರೆ. ಹಾಗು ಎಲ್ಲ ಜಾಗದಲ್ಲಿ ಕೈತೊಳೆಯಲು ಬೇಕಾದ ವ್ಯವಸ್ಥೆ ಮಾಡಲಾಗಿರುತ್ತದೆ, ಶುಚಿತ್ವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಗಿರುತ್ತದೆ. ಅಲ್ಲದೆ ಗರ್ಭಕೋಶದಲ್ಲಿರುವಾಗ ತಾಯಿಗೆ ಸೋಂಕಿದ್ದರೆ ತಾಯಿಯಿಂದ ಮಗುವಿಗೆ ಸೋಂಕು ಬರುವ ಸಾಧ್ಯತೆಯೂ ಇರುತ್ತದೆ. 

6. ತಾಯಿ ಮತ್ತು 
ಮಗುವನ್ನು   ಬೇರ್ಪಡಿಸಬೇಕಾದ ಪರಿಸ್ಥಿತಿ

ಶಿಶುವಿಗೆ ಮೇಲೆ ತಿಳಿಸಿದ ಎಲ್ಲಾ ತೊಂದರೆಗಳಿರುವುದರಿಂದ ಶಿಶುವನ್ನು ತಾಯಿಯಿಂದ ಬೇರ್ಪಡಿಸಿ ನವಜಾತ ಶಿಶುಘಟಕದಲ್ಲಿಡಬೇಕಾಗುವುದು. ಹೀಗೆ ತಾಯಿ ಹಾಗೂ ಮಗುವನ್ನು ಬೇರ್ಪಡಿಸುವುದರಿಂದ, ಶಿಶುವಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸ್ವಲ್ಪ$ ಧಕ್ಕೆಯಾಗುವುದಲ್ಲದೆ, ಮಗುವಿನ ಮುಂದಿನ ಬೆಳವಣಿಗೆಗೂ ಅಡಚಣೆಯಾಗುವುದೆಂದು ವೈದ್ಯಕೀಯ ಸಂಶೋಧನೆಯ ಮೂಲಕ ತಿಳಿದು ಬಂದಿದೆ. ಈ ಸಮಯದಲ್ಲಿ ಇತ್ತೀಚೆಗೆ ಶಿಶುವಿಗೆ ಗರ್ಭಕೋಶದಲ್ಲಿರುವಂತೆ ಬೆಚ್ಚಗೆ ಹಾಗೂ ಕೈಕಾಲನ್ನು ಗರ್ಭ ಕೋಶದಲ್ಲಿರುವಂತೆಯೇ ಮಡಚಿಡಲು ಸ್ನಗ್ಲ್ಅಪ್‌ ಎಂಬ ಭಂಗಿಯಲ್ಲಿ ಶಿಶುವನ್ನು ಇಡಲಾಗುವುದು. ಅದಲ್ಲದೆ ಹೆರಿಗೆಯ ನಂತರ ಚೇತರಿಸಿಕೊಂಡ ಕೂಡಲೇ ತಾಯಿಯಂದಿರನ್ನು ಶಿಶುಘಟಕಕ್ಕೆ ಕರೆದು ಶಿಶುವನ್ನು ಸ್ಪರ್ಶಿಸಲು ಹಾಗೂ ಸಾಧ್ಯವಾದಲ್ಲಿ ಕಾಂಗರೂ ಆರೈಕೆ ನೀಡಲು ನವಜಾತ ಶಿಶು ಘಟಕದ ಸಿಬಂದಿಯವರು ಪ್ರೋತ್ಸಾಹಿಸುವರು. ಈ ಎಲ್ಲಾ ಚಟುವಟಿಕೆಯಿಂದ ಶಿಶುವಿಗೆ ಮುಂದಿನ ಬೆಳವಣಿಗೆಗೆ ಅನುಕೂಲವಾಗುವುದೆಂದು ವೈದ್ಯಕೀಯ ಸಂಶೋಧನೆಗಳು ತೋರಿಸಿಕೊಟ್ಟಿವೆ.

7. ಇತರ ತೊಂದರೆ

ದೇಹದಲ್ಲಿ ಸಕ್ಕರೆಯ  ಅಂಶ ಕಡಿಮೆಯಾಗುವುದು ಈ ಶಿಶುಗಳ ಯಕೃತ್ತು ಬೆಳವಣಿಗೆ ಹೊಂದಿರದ ಕಾರಣ, ಯಕೃತ್ತುನಲ್ಲಿ ಸಕ್ಕರೆಯ ಅಂಶ ಸಂಗ್ರಹಿಸಿಡಲಾಗುವುದಿಲ್ಲ. ಇದರ ಪರಿಣಾಮವಾಗಿ ಶಿಶುವಿಗೆ ದೇಹಕ್ಕೆ ಬೇಕಾದಷ್ಟು ಗುÉಕೋಸ್‌ ದೊರೆಯದೆ ಈ ತೊಂದರೆ ಉಂಟಾಗುವ ಸಂಭವವಿರುತ್ತದೆ. ಮೂವತ್ತೆರಡು ವಾರಗಳ ಮೊದಲು ಜನಿಸಿದಲ್ಲಿ ರಕ್ತನಾಳದ ಮೂಲಕ ಸಕ್ಕರೆಯ ಅಂಶವನ್ನು  ನೀಡಬೇಕಾಗಬಹುದು. ಅಲ್ಲದೆ ದಿನಕ್ಕೆರಡು ಬಾರಿಯಾದರೂ ರಕ್ತದಲ್ಲಿ ಗುÉಕೋಸ್‌ ಅಂಶ ಎಷ್ಟಿದೆಯೆಂದು ಪರೀಕ್ಷಿಸಲಾಗುವುದು. ಶಿಶುವಿನ ದೇಹದಲ್ಲಿ ತೀರಾ ಸಕ್ಕರೆ ಅಂಶವು ಕಡಿಮೆಯಾಗುವುದರಿಂದ ಶಿಶುವಿನ ಮೆದುಳಿನ ಬೆಳವಣಿಗೆಗೆ ಅಡಚಣೆಯಾಗುವ ಸಂಭವ ಇರುತ್ತದೆ.
 
ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವ

ಅವಧಿ ಪೂರ್ವ ಜನಿಸಿದ ಶಿಶುಗಳ ಮೆದುಳು ತುಂಬಾ ಸೂಕ್ಷ್ಮವಾಗಿದ್ದು, ಕೆಲವು ಭಾಗಗಳಲ್ಲಿ ಬೇಗನೇ ರಕ್ತ ಸ್ರಾವವಾಗುವ ಸಂಭವ ಜಾಸ್ತಿ. ಇದನ್ನು ಪರೀಕ್ಷಿಸಲು ತಲೆಯ ಆಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಮಾಡಬೇಕಾಗಬಹುದು.

ಇದನ್ನು ತಡೆಗಟ್ಟಲು ಆರೈಕೆ ಮಾಡುವಾಗ ಡಯಾಪರ್‌ ಬದಲಾಯಿಸುವಾಗ ಅಥವಾ ಮಗ್ಗುಲು ತಿರುಗಿಸುವಾಗ ತೀರಾ ಸಣ್ಣ ಗಾತ್ರದ ಶಿಶುಗಳನ್ನು ಬಹಳ ನಾಜೂಕಾಗಿ ನೋಡಿಕೊಳ್ಳಬೇಕಾಗುವುದು, ಈ ಸಮಯದಲ್ಲಿ ಸ್ವಲ್ಪ$ ಏರು ಪೇರಾದರೂ ಮೆದುಳಿನಲ್ಲಿ ರಕ್ತ ಸ್ರಾವವಾಗುವ ಸಂಭವ ಇರುತ್ತದೆ. 

ಕಣ್ಣಿನ ದೃಷ್ಟಿ ಪಟಲದ ತೊಂದರೆ
ಅವಧಿ ಪೂರ್ವ ಜನಿಸಿದ ಶಿಶುಗಳ ಕಣ್ಣಿನ ಒಳಭಾಗವು ತುಂಬಾ ಸೂಕ್ಷ್ಮವಾಗಿದ್ದು ಈ ಶಿಶುಗಳಿಗೆ ಆಮ್ಲಜನಕ ನೀಡುವಾಗ ಬಹಳ ಜಾಗರೂಕತೆಯಿಂದ ನೀಡಬೇಕಾಗುತ್ತದೆ, ಅಲ್ಲದೆ ಹೆಚ್ಚಿನ ಬೆಳಕಿನ ಪ್ರಕಾಶಕ್ಕೆ ಮಗು ಕಣ್ಣು ತೆರೆಯದಂತೆ ನೋಡಿಕೊಳ್ಳಬೇಕಾಗುತ್ತದೆ. ದೃಷ್ಟಿ ಪಟಲದ ತೊಂದರೆಯನ್ನು ನಿವಾರಿಸಲು ಬೆಳವಣಿಗೆಯ  ಪ್ರತೀ ಹಂತದಲ್ಲಿ ವೈದ್ಯರ ಸಲಹೆಯಂತೆ ಅದಕ್ಕೆ  ಸರಿಯಾದ  ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುವುದು. ಇದನ್ನು ನಿಲ್ಯìಕ್ಷಿಸಿದಲ್ಲಿ ಮಗುವು ಅಂಧತ್ವಕ್ಕೆ ಒಳಗಾಗುವ ಸಂಭವ ಇರುತ್ತದೆ.

ನವಜಾತ ಶಿಶು ಘಟಕ ದಿಂದ 
ತಾಯಿಯ ವಾರ್ಡಿಗೆ 
ವರ್ಗಾವಣೆ ಯಾವಾಗ? 

ನವಜಾತ ಶಿಶುಘಟಕದಲ್ಲಿ ದಾಖಲಾತಿಯಾದ ಶಿಶುವಿನಲ್ಲಿ ಕಾಲಕ್ರಮೇಣ, ಉಸಿರಾಟ, ದೇಹದ ಉಷ್ಣತೆ ಕಾಪಾಡಿಕೊಳ್ಳುವಿಕೆ, ಸೋಂಕಿನ ತೊಂದರೆ ಕಡಿಮೆಯಾಗುತ್ತ ಬರುತ್ತದೆ ಅಲ್ಲದೆ ತೂಕ ಜಾಸ್ತಿಯಾಗಲೂ ಪ್ರಾರಂಭವಾಗುವುದು. ಶಿಶುವು 33 -34 ವಾರಗಳಿಗೆ ತಲುಪುವಾಗ ಬಾಯಿಯಲ್ಲಿ ಹಾಲನ್ನು ಚೀಪಲು ಆರಂಭಿಸುವುದು. ಒಂದು ಸಲ ಶಿಶುವು ಒಳಲೆಯಲ್ಲಿ ಧಾರಾಳವಾಗಿ ಚೀಪಲು ಹಾಗೂ ನುಂಗಲು ಪ್ರಾರಂಭಿಸಿದ ನಂತರ, ಸ್ತನವನ್ನು ಚೀಪಲು ನೀಡಲಾಗುವುದು, ಹೀಗೆ ಶಿಶುವು ಧಾರಾಳವಾಗಿ  ಸ್ತನ ಚೀಪುತ್ತಾ ತೂಕವು 15-20 ಗ್ರಾಮ್ಸ್‌ ಜಾಸ್ತಿಯಾಗಿ, 1500-1600 ಗ್ರಾಮ್ಸ್‌ ತಲುಪಿ, ಶಿಶುವು ಚಟುವಟಿಕೆಯಿಂದಿದ್ದು, ತಾಯಿಯು ಶಿಶುವನ್ನು ನೋಡಿಕೊಳ್ಳಲು ಸಮರ್ಥಳಾದಲ್ಲಿ  ಶಿಶುವನ್ನು ತಾಯಿಯ ಬಳಿ ವರ್ಗಾಯಿಸಲಾಗುವುದು.  

ಆಸ್ಪತ್ರೆಯಿಂದ ಅವಧಿ ಪೂರ್ವ/
ಕಡಿಮೆ ತೂಕದ ಶಿಶುವಿನ 
ಡಿಸಾcರ್ಜ್‌ ಯಾವಾಗ? 

ಮಗುವು ತಾಯಿಯ ಬಳಿ ವರ್ಗಾಯಿಸಿದ ನಂತರ ಒಂದೆರಡು ದಿನಗಳಲ್ಲಿ, ಶಿಶು ಹಾಗೂ ತಾಯಿಯು ಆರೋಗ್ಯವಂತರಾಗಿದ್ದು ಚೆನ್ನಾಗಿ ಹೊಂದಿಕೊಂಡು, ಶಿಶುವು ಚಟುವಟಿಕೆಯಿಂದಿದ್ದು, ತಾಯಿಯು ಶಿಶುವನ್ನು ನೋಡಿಕೊಳ್ಳುವ ಭರವಸೆ ವ್ಯಕ್ತ ಪಡಿಸಿದಲ್ಲಿ ಆಸ್ಪತ್ರೆಯಿಂದ ಡಿಸಾcರ್ಜ್‌ ಮಾಡಲಾಗುವುದು.

ಅವಧಿ ಪೂರ್ವ/ಕಡಿಮೆ ತೂಕದ 
ಶಿಶುವನ್ನು ಮನೆಯಲ್ಲಿ ಆರೈಕೆ 
ಮಾಡುವುದು ಹೇಗೆ?

ದೇಹದ ಶಾಖ ಕಾಪಾಡುವುದು
ಮೊದಲನೆಯದಾಗಿ ಮಗುವು ಮನೆಗೆ ತಲುಪುವ ಮೊದಲು ಮಗುವನ್ನು ಮಲಗಿಸುವ ಕೊಠಡಿಯನ್ನು ಚೆನ್ನಾಗಿ ಧೂಳು ತೆಗೆದು ಕ್ರಿಮಿನಾಶಕವನ್ನು ಉಪಯೋಗಿಸಿ ಸ್ವತ್ಛ ಮಾಡಿಟ್ಟುಕೊಳ್ಳಬೇಕು.
ಮಗುವಿಗೆ ಬೇಕಾಗುವ ಎಲ್ಲಾ ಬಟ್ಟೆ ಬರೆಗಳನ್ನು ಒಗೆದು ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಮಗುವನ್ನು ಮಲಗಿಸುವಾಗ ಹೊದಿಕೆಯನ್ನು ಸಡಿಲವಾಗಿ ಸುತ್ತಿ ಬೆಚ್ಚಗಿಡಬೇಕು, ಟೋಪಿ ಹಾಗೂ ಸಾಕ್ಸ್‌ ಗಳನ್ನು ಬಳಸಿ, ಕಾಂಗರೂ ಆರೈಕೆಯನ್ನು ಮುಂದುವರಿಸಿ. ಚಳಿಗಾಲದಲ್ಲಿ ಅಗತ್ಯವಿದ್ದಲ್ಲಿ ರೂಮ್‌ ಹೀಟರ್‌ ಬಳಸಿ.

ಪೌಷ್ಟಿಕತೆಯನ್ನು ಕಾಪಾಡುವುದು
ಮಗುವು ಎದೆ ಹಾಲು ಸರಿಯಾಗಿ ಚೀಪುತ್ತಿದ್ದಲ್ಲಿ ಅದನ್ನೇ ಮುಂದುವರಿಸಿ. ಸರಿಯಾಗಿ ಹಾಲು ಚೀಪದಿದ್ದಲ್ಲಿ, ಒಳಲೆ ಅಥವಾ ಚಮಚೆಯಿಂದಲೂ ಹಿಂಡಿದ ಹಾಲನ್ನು ಕುಡಿಸಬಹುದು.
ಹಾಲು ನೀಡುವಾಗ ಪ್ರತೀ ಸಲ ಒಂದು ಸ್ತನವನ್ನು ಪೂರ್ತಿ ಖಾಲಿ ಮಾಡಿ, ಇನ್ನೊಮ್ಮೆ ಇನ್ನೊಂದನ್ನು ನೀಡಿ, ಮತ್ತು ಹೀಗೆಯೇ ಪುನರಾವರ್ತಿಸಿ, ಹಾಲು ಜಾಸ್ತಿಯಿದ್ದಲ್ಲಿ ಹಿಂಡಿಟ್ಟು ಶೇಖರಿಸಿಡಿ. ಹೀಗೆ ಶೇಖರಿಸಿಟ್ಟ ಹಾಲನ್ನು ಆರು ತಾಸಿನವರೆಗೆ ಕೊಠಡಿಯ ತಾಪಮಾನದಲ್ಲಿ ಇಡಬಹುದು.

ಮಗುವಿಗೆ ಹಾಲು 
ಸಾಕಾಗುತ್ತದೆಂದು ಹೇಗೆ 
ತಿಳಿಯುತ್ತದೆ?

1.     ಹಾಲು ಕುಡಿದ ನಂತರ ಮಗುವು ಎರಡರಿಂದ ಮೂರು ತಾಸು ಚೆನ್ನಾಗಿ ಮಲಗುವುದು.
2.    ಎರಡರಿಂದ ಮೂರು ಬಾರಿ ಅಥವಾ ಜಾಸ್ತಿ ಸಲ ಮಲ ವಿಸರ್ಜನೆ ಹಾಗೂ ಆರರಿಂದ ಎಂಟು ಬಾರಿ ಮೂತ್ರ ಮಾಡುವುದು.
3.    ಪ್ರತೀ ದಿನಕ್ಕೆ 15 -20 ಗ್ರಾಮ್ಸ್‌ ತೂಕ ಜಾಸ್ತಿಯಾಗುವುದು. 
4.    ಮಗುವು ಚಟುವಟಿಕೆಯಿಂದ ಇರುವುದು
ವೈದ್ಯರ ಸಲಹೆಯಂತೆ ಸ್ತನದ ಹಾಲನ್ನು ಕಡ್ಡಾಯವಾಗಿ ಪೂರ್ತಿ ಆರು ತಿಂಗಳವರೆಗೆ ನೀಡಿ ಹಾಗೂ ವೈದ್ಯಕೀಯ ಇತರ ಸಲಹೆಯನ್ನು ಪಾಲಿಸಿ. ಬಾಟಲಿ ಹಾಲನ್ನು ನೀಡದಿರಿ. 

ಸೋಂಕಿನಿಂದ ತಡೆಗಟ್ಟುವಿಕೆ
ಮಗುವನ್ನು ಎತ್ತಿಕೊಳ್ಳುವುದಕ್ಕೆ ಮೊದಲು ಸಾಬೂನು ಬಳಸಿ ಚೆನ್ನಾಗಿ ಕೈ ತೊಳೆದುಕ್ಕೊಳ್ಳಿ.
ಮಗು ಹಾಗೂ ತಾಯಿ ಮಲಗುವ ಕೋಣೆಗೆ ಸೋಂಕು ಹೊಂದಿರುವವರು ಸಂದರ್ಶಿಸದಂತೆ ನೋಡಿಕೊಳ್ಳಿ

ಮಗುವಿಗೆ 2.5 ಕಿಲೊಗ್ರಾಮ್ಸ್‌ ತೂಕ ಬರುವವರೆಗೆ ಎಣ್ಣೆ ಸ್ನಾನ ಬೇಡ, ಸ್ವತ್ಛವಾದ ಬಟ್ಟೆಯಿಂದ ಒರಸಿಕೊಳ್ಳಿ

ಸ್ನಾನ ಮಾಡಿದ ನಂತರ ಪೌಡರ್‌ ಪಫ‚… ಬಳಸದಿರಿ. ಇದರಿಂದ ಪೌಡರ್‌ ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಇರಬಹುದು. ಡಯಾಪರ್‌ ಉಪಯೋಗಿಸುವ ಬದಲು ತೆಳ್ಳಗಿನ ಕಾಟನ್‌ ಬಟ್ಟೆಯನ್ನು ನ್ಯಾಪ್‌ ಕಿನ್‌ ಒಳಗೆಯಿಟ್ಟು ಎರಡು ಗಂಟೆಗೊಮ್ಮೆ ಬದಲಾಯಿಸಿ. ನಾಪಿRನ್‌ ಬದಲಾಯಿಸಿದ ನಂತರ, ಮಗುವಿನ ತೊಡೆಯ ಬಾಗಕ್ಕೆ ವ್ಯಾಸ್ಲಿನ್‌ ಹಚ್ಚಬೇಕು. ಸ್ವಚ್ಚಮಾಡುವಾಗ ಮುಂಭಾಗದಿಂದ ಹಿಂಭಾಗಕ್ಕೆ ತೊಳೆಯಿರಿ.ಇದರಿಂದ ಮೂತ್ರ ಕೋಶದ ಸೋಂಕನ್ನು ತಡೆಗಟ್ಟಬಹುದು.

ನಿದ್ದೆ ಮತ್ತು ಅದರ ಆವಶ್ಯಕತೆ
ಬೆಳೆಯುವ ಮಕ್ಕಳಿಗೆ ನಿದ್ದೆ ಅತ್ಯವಶ್ಯಕ, ಅವಧಿ ಪೂರ್ವ ಜನಿಸಿದ ಮಕ್ಕಳಿಗೆ 20-22 ಘಂಟೆ ಗಳ ಕಾಲ ನಿದ್ದೆಯ ಆವಶ್ಯಕತೆಯಿದೆ. ಸರಿಯಾಗಿ ನಿದ್ರಿಸಿದ ಶಿಶುಗಳು ಆರೋಗ್ಯವಂತರಾಗುವುದಲ್ಲದೆ, ಇದು ಮಗುವಿನ ಮಾನಸಿಕ ಹಾಗೂ ಗ್ರಹಿಕೆಯ ಶಕ್ತಿಗೂ ಉತ್ತೇಜನ ನೀಡುವುದು. ಮಗುವಿಗೆ ಹೆಚ್ಚಿನ ಸಮಯ ನಿದ್ದೆ ಮಾಡಬೇಕಾದರೆ,  ಮಗುವನ್ನು ಮಲಗಿಸುವ  ಕೋಣೆಯು ಸ್ವತ್ಛವಾಗಿ ಹಾಗೂ ಬೆಳಕು ಹಿತ-ಮಿತವಾಗಿರಬೇಕು, ನಿಶ್ಶಬ್ದವಿರಬೇಕು. ಮಗುವು ಎಚ್ಚರವಿರುವ ಸಮಯ ಅದನ್ನು ಮುದ್ದಿಸಿ, ಚಲನ ವಲನಗಳನ್ನು ಗಮನಿಸಿ, ಮಗುವಿನ ಕಣ್ಣಿಗೆ ಹಾಗೂ ಮನಸ್ಸಿಗೆ ಹಿತವಾಗುವಂತಹ ವಿವಿಧ ಬಣ್ಣದ ಆಟಿಕೆಗಳನ್ನು ಮಗುವಿನ ತೊಟ್ಟಿಲಿಗೆ ಪೋಣಿಸಿಕೊಳ್ಳಿ ಇದರೊಂದಿಗೆ ಲಘು ಸಂಗೀತವನ್ನು ಉಪಯೋಗಿಸಬಹುದು. ಹೀಗೆ ಮಗುವಿನ‌ ವಿವಿಧ ಇಂದ್ರಿಯಗಳನ್ನು ಉತ್ತೇಜಿಸುವುದರಿಂದ ಮಗುವಿನ ಗ್ರಹಿಕೆಯ ಶಕ್ತಿ, ಮಾನಸಿಕ ಹಾಗೂ ದೈಹಿಕ  ಬೆಳವಣಿಗೆಗೆ ಅನುಕೂಲವಾಗುವುದು.

ನಿಯಮಿತ ವೈದ್ಯರ ತಪಾಸಣೆ  
ಹಾಗೂ ಚುಚ್ಚು ಮದ್ದು 

ಸಮಯಕ್ಕೆ ಸರಿಯಾಗಿ ಮಗುವಿನ ಬೆಳವಣಿಗೆಯನ್ನು ಗಮನಿಸುವುದು, ಕಣ್ಣುಪರೀಕ್ಷೆ, ಶ್ರವಣ ಪರೀಕ್ಷೆ, ಶಿರದ ಆಲ್ಟ್ರಾ ಸೌಂಡ್‌ ಸ್ಕ್ಯಾನ್‌, ಏನಾದರೂ ನ್ಯೂನತೆ ಇದ್ದಲ್ಲಿ ಸರಿಪಡಿಸಿಕೊಳ್ಳುವುದು, ಇದಲ್ಲದೆ ಫಿಸಿಯೋತೆರಪಿಯ ಆವಶ್ಯಕತೆಯಿದ್ದಲ್ಲಿ ಅದನ್ನು ಸರಿಯಾಗಿ ಕಲಿತು ಮನೆಯಲ್ಲಿ ಪಾಲಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಚುಚುಮದ್ದನ್ನು ನೀಡುವುದು. ಈ ಎಲ್ಲಾ ಕ್ರಮಗಳನ್ನು ಅನುಸರಿಸುವುದರಿಂದ ಅವಧಿ ಪೂರ್ವ ಮಕ್ಕಳ ಬೆಳವಣಿಗೆಗೆ ಅನುಕೂಲವಾಗುವುದು.

ಅವಧಿ ಪೂರ್ವ/ ಕಡಿಮೆ ತೂಕವಿದ್ದು 
ಜನಿಸಿದ ಶಿಶುವೆಂದರೆ ಏನು? 

ಗರ್ಭಾಶಯದಲ್ಲಿ ಇರುವ ಶಿಶುವು ಮೂವತ್ತೇಳು ವಾರಗಳಿಗೆ ಮೊದಲು ಅಥವಾ 259 ದಿನಗಳ ಮೊದಲು ಜನಿಸಿದರೆ, ಆ ಶಿಶುವಿಗೆ ಅವಧಿ ಪೂರ್ವ ಶಿಶು ಎಂದೂ. ಹುಟ್ಟುವಾಗ 2.5 ಕಿಲೋಗ್ರಾಂಗಿಂತ ಕಡಿಮೆ ತೂಕವಿರುವ ಶಿಶು ಕಡಿಮೆ ತೂಕದ ಶಿಶುವೆಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.

ಅವಧಿ ಪೂರ್ವ/  ಕಡಿಮೆ ತೂಕದ  ಶಿಶುಗಳು
 ಜನಿಸಲು ಕಾರಣಗಳೇನು? 

ಗರ್ಭಿಣಿಯರಲ್ಲಿ ಸೋಂಕು.

ಅಧಿಕ ರಕ್ತದ ಒತ್ತಡ

ಗರ್ಭಧಾರಣೆಯ ಸಮಯದ ಮಧುಮೇಹ .

ಆರಂಭಿಕ ಸಮಯದಲ್ಲಿ ಗರ್ಭದಿಂದ ನೀರು ಹೋಗುವುದು.

ಗರ್ಭಕಂಠದ ತೊಂದರೆಗಳು.

ಗರ್ಭ ಸಂಬಂಧಿತ ತೊಂದರೆಗಳು. 

ಒಂದಕ್ಕಿಂತ ಹೆಚ್ಚು ಗರ್ಭಧಾರಣೆ (ಅವಳಿ, ತ್ರಿವಳಿ ಇತ್ಯಾದಿ). 

ಮಗುವಿನ ಬೆಳವಣಿಗೆ, ಅಕಾಲಿಕ ಜನನದ ತೊಂದರೆಗಳು. 

ಜೀವನಶೈಲಿ ಮತ್ತು ಅಕಾಲಿಕ ಜನನ .

ಅವಧಿ ಪೂರ್ವ/ ಕಡಿಮೆ ತೂಕವಿರುವ 
ಶಿಶುಗಳು ಎದುರಿಸುವ ತೊಂದರೆಗಳೇನು?

1.    ಉಸಿರಾಟದ ತೊಂದರೆ
2.    ದೇಹದ ಶಾಖ ಕಾಪಾಡುವಲ್ಲಿ ಕೊರತೆ
3.    ಪೌಷ್ಟಿಕತೆಯನ್ನು ಕಾಪಾಡುವ ತೊಂದರೆ
4.    ಪಿತ್ತ ಕಾಮಾಲೆಯ ತೊಂದರೆ
5.    ಸೋಂಕು ತಗಲುವ ಭೀತಿ
6.    ತಾಯಿ ಮತ್ತು ಮಗುವನ್ನು ಬೇರ್ಪಡಿಸಬೇಕಾದ ಪರಿಸ್ಥಿತಿ
7.    ಇತರ ತೊಂದರೆಗಳು

ಶಿಶುವಿನಲ್ಲಿ ಈ ಕೆಳಗಿನ ಯಾವುದೇ ಸೂಚನೆಗಳನ್ನು ಕಂಡಕೂಡಲೇ ಮಕ್ಕಳ ತಜ್ಞರನ್ನು ಸಂಪರ್ಕಿಸಿ:

ದೇಹದ ತಾಪಮಾನದಲ್ಲಿ ಏರುಪೇರು: (ಶಿಶುವಿನ ಶರೀರವು ತೀರಾ ತಣ್ಣಗಾಗಿರುವುದು, ಅಥವಾ ಬಿಸಿಯೇರಿರುವುದು) .

ಚಟುವಟಿಕೆಯಲ್ಲಿ ವ್ಯತ್ಯಾಸ: ಲವಲವಿಕೆಯಿಲ್ಲದಿರುವುದು ಅಥವಾ ಅತಿಯಾಗಿ ಕೂಗುವುದು.

ಉಸಿರಾಟದಲ್ಲಿ ವ್ಯತ್ಯಾಸ: (ವೇಗದ ಉಸಿರಾಟ- ಪ್ರತಿ ನಿಮಿಷಕ್ಕೆ 60ಕ್ಕಿಂತ ಅಧಿಕ ಅಥವಾ 15 ಸೆಕೆಂಡುಗಳ  ನಂತರವೂ ಉಸಿರಾಟ ಸ್ಥಗಿತವಾಗುವುದು ಪದೇ ಪದೇ ಕಾಣಿಸಿಕೊಳ್ಳುವುದು).

ಎದೆ ಹಾಲು ಚೀಪದೇ ಇರುವುದು: 2-4 ತಾಸು ಹಾಲು ನೀಡದಿದ್ದರೂ ಹಾಲು ಕುಡಿಯುವುದನ್ನು ನಿರಾಕರಿಸುವುದು.

ಹೊಟ್ಟೆ ಉಬ್ಬರಿಸುವುದು, ವಾಂತಿ, ಅತಿಯಾದ ಭೇದಿ.

ಹೊಕ್ಕಳಿನ ಸುತ್ತ  ಕೆಂಪಾಗಿರುವುದು.

ಪಿತ್ತ ಕಾಮಾಲೆ ಜಾಸ್ತಿಯಾದಂತೆ ಕಾಣುವುದು: (ಮುಖ, ಕೈ ಹಾಗೂ ಕಾಲಿನ ಭಾಗದಲ್ಲಿಯೂ ಹಳದಿ ತ್ವಚ್ಛೆ  ಕಾಣಿಸಿಕೊಳ್ಳುವುದು).

ಕೈ ಅಥವಾ ಕಾಲು  ಅಲ್ಲಾಡಿಸುವಾಗ ತೀವ್ರ ನೋವಿನಿಂದ ಕಿರಿಚುವುದು.

ಡಾ| ಯಶೋದಾ ಸತೀಶ್‌,  
ಅಸಿಸ್ಟಂಟ್‌ ಪ್ರೊಫೆಸರ್‌,  ಮಕ್ಕಳ ಶುಷೂÅಷಾ 
ವಿಭಾಗ,  ಮಣಿಪಾಲ್‌ ಕಾಲೇಜ್‌ ಆಫ್ 
ನರ್ಸಿಂಗ್‌, ಮಣಿಪಾಲ.

Trending videos

Back to Top