CONNECT WITH US  

ಮಣ್ಣಿಲ್ಲದೆ ಮೇವು ಬೆಳೆದ ರೈತನಿಗೆ ನಬಾರ್ಡ್‌ ಮೆಚ್ಚುಗೆ!

ರೈತನ ಪ್ರಯೋಗಕ್ಕೆ 19 ರಾಜ್ಯಗಳ ನಬಾರ್ಡ್‌ ಅಧಿಕಾರಿಗಳ ಭೇಟಿ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕಡಿಮೆ ವೆಚ್ಚದಲ್ಲಿ ಹೈಡ್ರೋಪೊನಿಕ್‌ ಮೂಲಕ ಹೆಚ್ಚು ಪೌಷ್ಟಿಕಾಂಶ ಮೇವು ಬೆಳೆಯುವುದು, ಹೈನುಗಾರಿಕೆ ಕುರಿತಾಗಿ ಕುಸುಗಲ್ಲ ಬಳಿ ಹುಬ್ಬಳ್ಳಿ ರೈತರೊಬ್ಬರು ಕೈಗೊಂಡ ಶ್ರಮಕ್ಕೆ ದೇಶದ 19 ರಾಜ್ಯಗಳ ನಬಾರ್ಡ್‌ ಅಧಿಕಾರಿಗಳ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರೈತರ ಆದಾಯ ದುಪ್ಪಟ್ಟು ಯತ್ನಗಳಲ್ಲಿ ಇದನ್ನು ಮಾದರಿಯಾಗಿ ಅಳವಡಿಕೆ ನಿಟ್ಟಿನಲ್ಲಿ ಮಹತ್ವದ ಮಾಹಿತಿ
ಪಡೆದುಕೊಂಡಿದ್ದಾರೆ. 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ.ಎಫ್. ವಿಜಾಪುರ ಅವರ ಪುತ್ರ ಪ್ರಕಾಶ ವಿಜಾಪುರ ಪದವೀಧರರಾದರೂ ಕೃಷಿ ಕಡೆಗೆ ಮುಖ ಮಾಡಿದ್ದು, ಹೈನುಗಾರಿಕೆಗೆ ಒತ್ತು ನೀಡಿದ್ದಾರೆ. ಜಾನುವಾರುಗಳಿಗೆ ಪೌಷ್ಟಿಕ ಆಹಾರ, ಮೇವು ಒದಗಿಸಲು ಮಣ್ಣಿಲ್ಲದೆ ನೀರಿನ ಆಸರೆಯಲ್ಲೇ ಪೌಷ್ಟಿಕ ಮೇವು ಬೆಳೆಸುವ ಹೈಡ್ರೋಪೋನಿಕ್‌ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹೈಡ್ರೋಫೋನಿಕ್‌ ಮೇವು ಸೇವನೆಯಿಂದ ಹಸುಗಳ ಹಾಲು ನೀಡಿಕೆ ಹಾಗೂ ಹಾಲಿನ ಕೊಬ್ಬಿನಂಶವೂ ಹೆಚ್ಚಳವಾಗಿದೆ. 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯ. ಇದಕ್ಕೆ ಪೂರಕವಾಗಿ ನಬಾರ್ಡ್‌ ಅಧಿಕಾರಿಗಳ ತಂಡ ರೈತರ ಆದಾಯ ದುಪ್ಪಟ್ಟು ಹಾಗೂ ಸಮಗ್ರ ಕೃಷಿ ಉತ್ತೇಜನ ನಿಟ್ಟಿನಲ್ಲಿ ರೈತರು ಕೈಗೊಂಡ ಪ್ರಯೋಗ, ಸಾಧನೆಗಳ ವೀಕ್ಷಣೆಗೆ ದೇಶಾದ್ಯಂತ ಪರ್ಯಟ ಮಾಡುತ್ತಿದ್ದು, ಅದರ ಅಂಗವಾಗಿಯೇ ಇತ್ತೀಚೆಗೆ 19 ರಾಜ್ಯಗಳ ನಬಾರ್ಡ್‌ ಅಧಿಕಾರಿಗಳ ತಂಡವೊಂದು ಕುಸುಗಲ್ಲಗೆ ಭೇಟಿ ನೀಡಿ ಹೈಡ್ರೋಫೊನಿಕ್‌ನಿಂದ ಪೌಷ್ಟಿಕ ಮೇವು ಹಾಗೂ ಹೈನುಗಾರಿಕೆ ಕುರಿತಾಗಿ ಮಾಹಿತಿ ಪಡೆದಿದ್ದಾರೆ.

ಭೇಟಿ ನೀಡಿದ್ದು ಯಾರ್ಯಾರು?: ಕೇರಳ, ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಅಂಡಮಾನ್‌-ನಿಕೋಬಾರ್‌, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್‌, ಅಸ್ಸಾಂ, ಉತ್ತರಾಖಂಡ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ, ಛತ್ತೀಸಗಢ, ಗೋವಾ ರಾಜ್ಯಗಳ ನಬಾರ್ಡ್‌ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ನಬಾರ್ಡ್‌ನ ಧಾರವಾಡ ಡಿಡಿಎಂ ಶೀಲಾ ಭಂಡಾರಕರ ಅವರ ನೇತೃತ್ವದಲ್ಲಿ ನಬಾರ್ಡ್‌ನ ವಿವಿಧ ಅಧಿಕಾರಿಗಳು ಹೈಡ್ರೋಫೊನಿಕ್‌ ಅಳವಡಿಕೆ, ನಿರ್ವಹಣೆ, ಮೇವು ಬೆಳೆಯುವ ವಿಧಾನ, ಈ ಮೇವು ಸೇವನೆಯಿಂದ ಹಸು ಹಾಗೂ ಹೈನುಗಾರಿಕೆಗೆ ಆಗಿರುವ ಪ್ರಯೋಜನ, ಲಾಭ ಕುರಿತಾಗಿ ರೈತ ಪ್ರಕಾಶ ವಿಜಾಪುರ ಅವರೊಂದಿಗೆ ಸಂವಾದ ನಡೆಸಿದ್ದಾರೆ. ರೈತರ ಆದಾಯ ದುಪ್ಪಟ್ಟು ಹಾಗೂ ಸಮಗ್ರ ಕೃಷಿ ಪದ್ಧತಿಯಡಿಯಲ್ಲಿ ಇಲ್ಲಿನ ಮಾದರಿಯನ್ನು ತಮ್ಮ ರಾಜ್ಯದ ರೈತರಿಗೆ ಮಾಹಿತಿ ನೀಡಿಕೆ ಹಾಗೂ ಪ್ರಯೋಗಕ್ಕೆ ಮುಂದಾಗುವ ಪ್ರೇರಣೆ ನೀಡುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಕೃವಿವಿಯಿಂದ ರೈತರ ಭೇಟಿ: ಪ್ರಕಾಶ ವಿಜಾಪುರ ಅವರ ಡೈರಿ ಹಾಗೂ ಹೊಲ ರೈತರಿಗೆ ಪ್ರಯೋಗ ಶಾಲೆಯಂತಾಗಿದೆ. ವಿವಿಧ ಜಿಲ್ಲೆಗಳ ರೈತರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಿಂದ ಸುಮಾರು 40 ರೈತರು, ದಾವಣಗೆರೆ ಜಿಲ್ಲೆ ಕೃಷಿ ಇಲಾಖೆಯಿಂದ 45 ರೈತರು ಹಾಗೂ ಹಾವೇರಿ ಜಿಲ್ಲೆ ಕೃಷಿ ಇಲಾಖೆಯಿಂದ 45 ಜನ ರೈತ ಮಹಿಳೆಯರನ್ನು ಕರೆತಂದು ವೀಕ್ಷಣೆ ಮಾಡಿಸಲಾಗಿದೆ. ಧಾರವಾಡ ಕೃವಿವಿ ಬಿಎಸ್ಸಿ (ಅಗ್ರಿ)ಅಂತಿಮ ವರ್ಷ ವಿದ್ಯಾರ್ಥಿಗಳಿಗೆ ಪ್ರಯೋಗಿಕ ತರಬೇತಿಗೆ ಮೂವರು ವಿದ್ಯಾರ್ಥಿಗಳನ್ನು ಇದೇ ಡೈರಿಗೆ ಕಳುಹಿಸಲಾಗಿತ್ತು. 80 ಅಂಕಗಳನ್ನು ಇದಕ್ಕೆ ನಿಗದಿ ಪಡಿಸಲಾಗಿತ್ತು.

ಹೈಡ್ರೋಫೊನಿಕ್‌ ವ್ಯವಸ್ಥೆ
ಸಾವಿರಾರು ರೈತರಿಗೆ ಪ್ರೇರಣೆಯಾಗಿದೆ. ಒಂದೂವರೆ ವರ್ಷಗಳಲ್ಲಿ ಸುಮಾರು 3-4 ಸಾವಿರ ಕಡೆ ರೈತರು ಹೈಡ್ರೋಫೋನಿಕ್‌ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. 
 ●ಪ್ರಕಾಶ ವಿಜಾಪುರ, ಕೃಷಿಕ

ಅಮರೇಗೌಡ ಗೋನವಾರ

Trending videos

Back to Top