CONNECT WITH US  

ಅವರ್‌... bit ಇವರ್‌... bit

ಜಗ್ಗೇಶ್‌ ಏನೇ ಮಾತಾಡಿದರು ಜನ ನಗುತ್ತಾರೆ ಅನ್ನೋದು ಹಳೆಯ ಸತ್ಯ. ಹರಿಪ್ರಿಯ ಏನೇ ಮಾಡಿದರೂ ನೋಡುತ್ತಾರೆ ಅನ್ನೋದು ಹೊಸ ಮಿಥ್ಯ. ದತ್ತಣ್ಣ ಕೂಡ ಭಾರತ್‌ ಸ್ಟೋರ್‌ನಲ್ಲಿ ನೀರ್‌ದೋಸೆ ಮಾರೋಕೆ ಕೂತಿದ್ದಾರೆ ಅನ್ನೋದು ಮಾತ್ರ ನಿತ್ಯಸತ್ಯ.

- ವಸಿಷ್ಠಾದ್ವೆ„ತ!
ಕನ್ನಡ ಚಿತ್ರರಂಗಕ್ಕೆ ಹೊಸಬರು ಬಂದು ಸಿಕ್ಕಾಪಟ್ಟೆ ಒಳ್ಳೊಳ್ಳೆಯ ಸಿನಿಮಾಗಳು ಬರ್ತಿವೆ ನಿಜ. ಆದರೆ ಹೊಸಬರ ಮಧ್ಯೆ ಹಿರಿಯರು ಕಳೆದೇ ಹೋಗ್ತಿದ್ದಾರಾ? ಈ ಕತೆ ಕೇಳಿ. ಐವತ್ತು ಸೀರಿಯಲ್ಲುಗಳಲ್ಲಿ, ಮೂವತ್ತು ಸಿನಿಮಾಗಳಲ್ಲಿ, ನೂರಾರು ನಾಟಕಗಳಲ್ಲಿ ನಟಿಸಿದ ನಟರೊಬ್ಬರು ನೂರು ಸಿನಿಮಾ ಮಾಡಿದ ನಿರ್ದೇಶಕರೊಬ್ಬರ ಬಳಿ ಅವರ ಹೊಸ ಚಿತ್ರದಲ್ಲೊಂದು ಅವಕಾಶ ಕೊಡಿ ಅಂತ ಕೇಳಿಕೊಂಡು ಫೋನ್‌ ಮಾಡುತ್ತಾರೆ. ಆ ಪ್ರಸಿದ್ಧ ನಿರ್ದೇಶಕರು, ನನ್ನ ಪ್ರೊಡಕ್ಷನ್‌ ಮ್ಯಾನೇಜರ್‌ಗೆ ಫೋನ್‌ ಮಾಡ್ರಿ ಎನ್ನುತ್ತಾರೆ. ಪ್ರೊಡಕ್ಷನ್‌ ಮ್ಯಾನೇಜರ್‌ ಥಟ್ಟನೆ, ತೀರಾ ಹೊಸಬರಿಗೆ ಹೇಳುವಂತೆ, ಒಂದ್‌ ಫೋಟೋ ಕಳಿಸಿ, ನೋಡೋಣ ಅಂತಾರೆ. ಇವರು ಫೋಟೋ ಕಳಿಸಿಕೊಡುತ್ತಾರೆ. ಎರಡು ದಿನ ಬಿಟ್ಟು ಫೋನ್‌ ಮಾಡಿದಾಗ, ನಿಮ್ಮ ನಂಬರೇ ಸಿಗಲಿಲ್ಲ, ಪಾತ್ರ ಬೇರೆಯವರ ಪಾಲಾಯಿತು ಅನ್ನುವ ಉತ್ತರ ಬರುತ್ತದೆ. 
ಅದಾಗಿ ಸ್ವಲ್ಪ ದಿನಕ್ಕೆ ಮತ್ತೂಬ್ಬ ಹಿರಿಯ ನಿರ್ದೇಶಕರ ಸಿನಿಮಾ ಶುರುವಾಗುತ್ತದೆ. ಆ ಚಿತ್ರದ ಪ್ರೊಡಕ್ಷನ್‌ ಮ್ಯಾನೇಜರ್‌ ಮನೆಗೆ ಬರುತ್ತಾನೆ. ನಾಯಕಿಯ ಅಣ್ಣನ ಪಾತ್ರ ಇದೆ, ಸಂಭಾವನೆ ಎಷ್ಟು ಎಂದು ಕೇಳುತ್ತಾನೆ. ಇವರು ನೀವೇ ಒಂದು ಮೊತ್ತ ನಿಗದಿ ಮಾಡಿ ಹೇಳಿ ಅನ್ನುತ್ತಾರೆ. ನೀವು ಹೇಳಿ, ನೀವು ಹೇಳಿ ಎಂಬ ಅರ್ಧಗಂಟೆಯ ಚೌಕಾಸಿಯ ನಂತರ ಪ್ರೊಡಕ್ಷನ್‌ ಮ್ಯಾನೇಜರ್‌ ಹೇಳುತ್ತಾರೆ. ಸ್ವಾಮೀ, 15 ದಿನದ ಕಾಲ್‌ಶೀಟ್‌ ಬೇಕು. ಇಪ್ಪತ್ತೈದು ಸಾವಿರ ರುಪಾಯಿ ಕೊಡ್ತೀವಿ.

ಹೀಗೆ ಚಿತ್ರರಂಗದಿಂದ ಉತ್ತರ ಪಡಕೊಂಡವರು ಶ್ರೀನಾಥ್‌ ವಸಿಷ್ಠ. ಅವರು "ಮಂಥನ' ಮತ್ತು "ಸಲಿಲ' ಎಂಬೆರಡು ಚಿತ್ರಗಳ ನಿರ್ದೇಶಕರು ಕೂಡ. ಅತ್ಯುತ್ತಮ ಹಾಸ್ಯನಟ, ಸ್ಟಾಂಡಪ್‌ ಕಾಮಿಡಿಯನ್‌, ಡಬ್ಬಿಂಗ್‌ ಕಲಾವಿದ, ರಂಗಭೂಮಿ ನಟ ಎಲ್ಲವೂ ಆಗಿರುವ ಶ್ರೀನಾಥ್‌ ವಸಿಷ್ಠ ಚಿತ್ರರಂಗಕ್ಕೆ ಬಂದು 29 ವರ್ಷವಾಯಿತು. ಮೊನ್ನೆ ಮೊನ್ನೆ ರಂಗಿತರಂಗ, ಮಿಸ್ಟರ್‌ ಮೊಮ್ಮಗ ಚಿತ್ರದಲ್ಲೂ ನಟಿಸಿದ್ದ ಶ್ರೀನಾಥ್‌, ಶಶಾಂಕ್‌ ನಿರ್ದೇಶನದ ಬಚ್ಚನ್‌ ಚಿತ್ರದಲ್ಲಿ ನಾಜರ್‌ಗೆ ಕಂಠದಾನ ಮಾಡಿದವರು. 

ನಾನೀಗ ಕಿರುತೆರೆ ಬಿಡಬೇಕೂಂತಿದ್ದೀನಿ. ನಾನೂ ಅಚ್ಯುತಕುಮಾರ್‌ ಇಬ್ಬರೂ ಜೊತೆಗೇ ಸೀರಿಯಲ್ಲುಗಳಲ್ಲಿ ನಟಿಸ್ತಿದ್ವಿ. ಅಚ್ಯುತಕುಮಾರ್‌ ಹತ್ತು ವರುಷಗಳ ಹಿಂದೆಯೇ ಸೀರಿಯಲ್ಲು ಸಾಕು ಅಂದರು. ಆಗ ಬಿಡೋಕೆ ನನಗೆ ಧೈರ್ಯ ಬರಲಿಲ್ಲ. ಈಗ ಬಿಟ್ಟು ಬರ್ತೀನಿ ಅಂದ್ರೂ ಅವಕಾಶಗಳೇ ಇಲ್ಲ. ನಾನೂ ಒಬ್ಬ ನಟ, ಒಂದು ಅವಕಾಶ ಕೊಡಿ ಅನ್ನೋದು ಶ್ರೀನಾಥ್‌ ವಿನಂತಿ. ಮೊನ್ನೆ ಮೊನ್ನೆ ಶ್ರೀನಾಥ್‌ ಮತ್ತೂಬ್ಬ ಸಹಾಯಕ ನಿರ್ದೇಶಕರ ಬಳಿ, ನನ್ನ ನಟನೆ ನಿಮಗೆ ಗೊತ್ತಲ್ಲ, ಅವಕಾಶ ಇದ್ದರೆ ಹೇಳಿ ಅಂದಾಗ ಅವರು, ನಿಮ್ಮ ನಟನೆ ನನಗಲ್ಲ, ಇಡೀ ಕರ್ನಾಟಕಕ್ಕೇ ಗೊತ್ತು ಅಂದರಂತೆ.

ಕರ್ನಾಟಕಕ್ಕೆ ಗೊತ್ತಿದ್ದರೆ ಸಾಲದು, ಗಾಂಧೀನಗರಕ್ಕೂ ಗೊತ್ತಾಗಬೇಕಲ್ಲ!

ಹೊಸ ನೀತಿ ಬರ್ತಾ ಇದೆ!
ಇನ್ನೇನು ಹೊಸ ಚಲನಚಿತ್ರ ನೀತಿ ಜಾರಿಗೆ ಬರಲಿದೆ. ಈಗಾಗಲೇ ಸಮಿತಿ ಕೂತು ಮಾತಾಡಿ ಒಪ್ಪಿಗೆ ನೀಡಿರುವ ಹೊಸ ಚಲನಚಿತ್ರ ನೀತಿಯಲ್ಲಿ ಬಹಳಷ್ಟು ಬದಲಾವಣೆಗಳಂತೂ ಆಗಿವೆ ಅನ್ನುವ ಗುಮಾನಿ ಚಿತ್ರರಂಗಕ್ಕಿದೆ. 
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ  ಹತ್ತು ಚಿತ್ರಗಳಿಗೆ ತಲಾ ಮೂವತ್ತು ಲಕ್ಷ, ನಾಲ್ಕು ಮಕ್ಕಳ ಚಿತ್ರಕ್ಕೆ ತಲಾ 25 ಲಕ್ಷ, ಕನ್ನಡದ ಕತೆ, ಕಾದಂಬರಿ, ಗೀತಸಾಹಿತ್ಯ ಆಧರಿಸಿದ 20 ಚಿತ್ರಗಳಿಗೆ ತಲಾ 20 ಲಕ್ಷ ಸಹಾಯಧನ ನೀಡುವ ಪ್ರಸ್ತಾಪವನ್ನು ಸಮಿತಿ ಮುಂದಿಟ್ಟಿದೆ.

ಇದೇನಾದರೂ ಜಾರಿಗೆ ಬಂದರೆ ಇದ್ದಕ್ಕಿದ್ದಂತೆ ಕನ್ನಡದ ಕತೆಗಾರರಿಗೆ ಬೇಡಿಕೆ ಬರಲಿದೆ.  ಕನ್ನಡದ ಕತೆ ಕಾದಂಬರಿಗಳ ಹಕ್ಕುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಲಿದೆ. ಪರೋಕ್ಷವಾಗಿ ಇದು ಕನ್ನಡದ ಕತೆ, ಕಾದಂಬರಿ ಲೇಖಕರಿಗೆ ಆಗುವ ಲಾಭ ಎಂದು ಕನ್ನಡ ಲೇಖಕರ ಸಂಘ ಸಂತೋಷಪಟ್ಟಿದೆ ಅನ್ನುವುದು ಮಾತ್ರ ಸುಳ್‌ ಸುದ್ದಿ. ಆದರೆ, ಕರ್ನಾಟಕದ ಪ್ರವಾಸಿ ತಾಣಗಳಿಗೆ ಕೆಮರಾ ಒಯ್ದು ಚಿತ್ರೀಕರಿಸುವವರ ಸಂಖ್ಯೆಯಂತೂ ಹೆಚ್ಚಲಿದೆ. ಆದರೆ, ಒಂದು ಅಪಾಯಕಾರಿ ಅಂಶವೂ ಈ ನೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕನಿಷ್ಠ 10 ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಬಿಡುಗಡೆಗೊಂಡ ಚಿತ್ರಕ್ಕೆ ಮಾತ್ರ ಇನ್ನು ಮುಂದೆ ಸಹಾಯಧನ ಸಿಗಲಿದೆ. ಇದೀಗ ಹತ್ತು ಚಿತ್ರಮಂದಿರಗಳನ್ನು ಗುರುತಿಸುವ ಕೆಲಸವನ್ನು ನಿರ್ದೇಶಕರೂ ನಿರ್ಮಾಪಕರೂ ತುರ್ತಾಗಿ ಮಾಡಬೇಕಾಗಿದೆ!

ಸತ್ಯಾನ್ವೇಷಣೆ!
"ಜಯನಗರ ಪೋರ್ಥ್ ಬ್ಲಾಕ್‌'  ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಸತ್ಯ ಮತ್ತೆ ವಾಪಸ್‌ ಬಂದಿದ್ದಾರೆ. ಈ ಬಾರಿ ಒಂದು ಪೂರ್ಣಪ್ರಮಾಣದ ಸಿನಿಮಾದೊಂದಿಗೆ ಮರಳಿದ್ದಾರೆ.  ಯಾವ ದೊಡ್ಡ ನಿರ್ಮಾಪಕರ ನೆರವೂ ಇಲ್ಲದೇ, ದೊಡ್ಡ ಬಂಡವಾಳದ ಬೆಂಬಲವೂ ಇಲ್ಲದೇ, ಗೆಳೆಯರ ಬಳಗದಿಂದ ನಿರ್ಮಾಣವಾದ ಚಿತ್ರ ಅದು. ಅದಕ್ಕವರು "ರಾಮಾ ರಾಮಾ ರೇ' ಎಂದು ಹೆಸರಿಟ್ಟಿದ್ದಾರೆ. ಸಂಗೀತ ನೀಡಿರುವ ವಾಸುಕಿ ವೈಭವ್‌, ಛಾಯಾಗ್ರಾಹಕ ಲವಿತ್‌, ನಟಿಸಿರುವ ನಟರಾಜ್‌, ಜಯರಾಮ, ಧರ್ಮಣ್ಣ, ಬಿಂಬಶ್ರೀ ಎಲ್ಲರೂ ಹೊಸಬರೇ. 

ಸತ್ಯ ಕತೆ ಬರೆದು, ಗೆಳೆಯರ ಜೊತೆ ಕೂತು ಸಂಭಾಷಣೆ ಬರೆದು ನಿರ್ದೇಶಿಸಿದ ರಾಮಾರಾಮಾ ರೇ ಚಿತ್ರವನ್ನು ನೋಡಿದವರು ಮೆಚ್ಚಿಕೊಂಡಿದ್ದಾರಂತೆ. "ಜಗ್ಗುದಾದ' ಚಿತ್ರದ ವಿತರಕರು ಸಿನಿಮಾ ನೋಡಿ ಮರುಳಾಗಿ ತಾವೇ ಹಂಚಿಕೆ ಮಾಡುವುದಕ್ಕೂ ಮುಂದೆ ಬಂದಿದ್ದಾರಂತೆ. ಸೆಪ್ಟೆಂಬರ್‌ ತಿಂಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ ಅಂತಾರೆ ಸತ್ಯ.
ಅದೆಲ್ಲ ಹಾಗಿರಲಿ, ಸತ್ಯ ಒಂದು ತಂಡ ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಸಿನಿಮಾ ಮಾಡುತ್ತಿರುವುದು ಹೊಸ ಹುಡುಗರಿಗೆ ಸ್ಪೂರ್ತಿಯಾಗಬಹುದು. ಈಗಂತೂ ಹೊಸತನದ ಚಿತ್ರಗಳನ್ನು ಪ್ರೇಕ್ಷಕ ಒಪ್ಪಿಕೊಳ್ಳಲು ಶುರು ಮಾಡಿದ್ದಾನೆ. ಇವತ್ತಿನ ಸಿನಿಮಾದ ಸೂಪರ್‌ ಸ್ಟಾರ್‌ ಯಾರೆಂದರೆ, ಕತೆ ಅನ್ನುತ್ತಾರೆ. ಸತ್ಯಕತೆಗಳಿಗೆ ಬೇಡಿಕೆ ಜಾಸ್ತಿ.
"ರಾಮಾರಾಮಾ ರೇ' ಚಿತ್ರದ್ದೂ ಸತ್ಯ ಕತೆ! ಹೇಗೆಂದರೆ ಅದನ್ನು ಬರೆದವರು ಸತ್ಯ. ಇದೀಗ ಸತ್ಯಂಗೆ ಸಿಗಬೇಕಾಗಿರುವುದು ಪ್ರೇಕ್ಷಕರು ಮತ್ತು ಮೆಚ್ಚುಗೆ ಮಾತ್ರ!

ಭಾರತ್‌ಸ್ಟೋರ್ಸಲ್ಲಿ ನೀರ್‌ದೋಸೆ
ನಿಜಜೀವನದಲ್ಲಿ ದತ್ತಣ್ಣ ಒಂದೇ ಒಂದು ಡಬಲ್‌ ಮೀನಿಂಗ್‌ ಡೈಲಾಗನ್ನೂ ಹೇಳಿದವರಲ್ಲ. ಯಾರಾದರೂ ಅವರ ಮುಂದೆ ಅಂಥ ಮಾತಾಡಿದರೆ ದತ್ತಣ್ಣ, ಹೊಸ ಹರೆಯದ ಹುಡುಗನಂತೆ ನಾಚಿ ಕೆಂಪಾಗುತ್ತಾರೆ. ಅಂಥದ್ದರಲ್ಲಿ ಸ್ಟ್ರೆಂಥ್‌ಗೆ ಏನ್ಮಾಡ್ತೀರಿ ಅಂತ ಅಂಥ ಹುಡುಗಿ ಕೇಳಿದಾಗ, ದತ್ತಣ್ಣ ನೀವು ಜ್ವರ ಬಂದಾಗ ಮಾತ್ರೆ ತಗೋತೀರಲ್ಲ, ನಾನೂ ಅದನ್ನೇ ಮಾಡ್ತೀನಿ ಅಂದುಬಿಟ್ರಲ್ಲ ಅಂತ ಅವರ ಅಭಿಮಾನಿಗಳೆಲ್ಲ ನಾಚಿ ಕೆಂಪಾಗಿದ್ದಾರಂತೆ.

ಅಂತೂ ವಿಜಯಪ್ರಸಾದ್‌ ದತ್ತಣ್ಣ ಕೈಲೂ "ನೀರ್‌ ದೋಸೆ' ಹಾಕಿಸಿಬಿಟ್ಟಿದ್ದಾರೆ. "ಸಿದ್ಲಿಂಗು' ಚಿತ್ರದಲ್ಲಿ ಕಡ್ಲೆàಬೀಜಕ್ಕೆ ಮೊರೆಹೋಗಿದ್ದ ವಿಜಯ ಪ್ರಸಾದ್‌ ಅರ್ಥಾತ್‌ ವಿಪ್ರರು, ಇಲ್ಲಿ ನೀರ್‌ ದೋಸೆ ಹುಯ್ಯುವುದನ್ನು ರೂಢಿಸಿಕೊಂಡಂತಿದೆ. "ನೀರ್‌ ದೋಸೆ'ಯ ಗುಣವೇ ಕಾವಲಿಯಲ್ಲಿ ಒಂದೇ ಕಡೆ ನಿಲ್ಲದೇ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಆಗುವುದಾದ್ದರಿಂದ, ಮಾತು ಕೂಡ ಎಷ್ಟೋ ಕಡೆ ಸುಖಾಸುಮ್ಮನೆ ಹರಿದು ಹೋದಂತಿದೆ. "ನೀರ್‌ ದೋಸೆ'ಗೆ ಹುಳ ಬಿದ್ದರೂ ಸೊಗಡು ಜಾಸ್ತಿ ಇರುವ ಅವರೇ ಕಾಯಿ ಮುದ್ದೆ ಹುಳಿಯನ್ನೂ ಸೌಮ್ಯ ಮಾಡಿಟ್ಟೇ ಹೋದಂತಿದೆ. 

ಡಬಲ್‌ ಮೀನಿಂಗು ಬೇಕಿಲ್ಲ ಅಂತ ಜನ ಹೇಳ್ತಿರೋ ಹೊತ್ತಲ್ಲಿ ವಿಪ್ರ, ನನ್ನದು ಮಾತ್ರ ಸಿಂಗಲ್‌ ಮೀನಿಂಗೇ ಅಂತ ಅವರದೇ ಎದೆತಟ್ಟಿ ಹೇಳಿಕೊಳ್ಳುವಂಥ ಮಾತುಗಳನ್ನು ಬರೆದಿದ್ದಾರೆ. ಒಂದು ಹಳೆಯ ಚಿತ್ರವನ್ನು ಹೊಸ ಮಾತು ಎತ್ತಬಲ್ಲದು ಅನ್ನೋದಕ್ಕೂ "ನೀರ್‌ ದೋಸೆ' ಸಾಕ್ಷಿ. ಹಿಟ್ಟು ಹುಳಿಯಾದರೆ ನೀರ್‌ ದೋಸೆ ಕೆಡುತ್ತೆ. ಮಾತು ಹುಳಿಯಾದರೆ ಏನ್‌ ಕೆಡುತ್ತೆ ಅಂತ ಥೇಟ್‌ ಅವರದೇ ಧಾಟಿಯಲ್ಲಿ ಬೇಕಿದ್ದವರು ಕೇಳಿಕೊಂಡು ಸುಮ್ಮನಾಗಬಹುದು. ಜಗ್ಗೇಶ್‌ ಏನೇ ಮಾತಾಡಿದರು ಜನ ನಗುತ್ತಾರೆ ಅನ್ನೋದು ಹಳೆಯ ಸತ್ಯ. ಹರಿಪ್ರಿಯ ಏನೇ ಮಾಡಿದರೂ ನೋಡುತ್ತಾರೆ ಅನ್ನೋದು ಹೊಸ ಮಿಥ್ಯ. ದತ್ತಣ್ಣ ಕೂಡ ಭಾರತ್‌ ಸ್ಟೋರ್‌ನಲ್ಲಿ "ನೀರ್‌ದೋಸೆ' ಮಾರೋಕೆ ಕೂತಿದ್ದಾರೆ ಅನ್ನೋದು ಮಾತ್ರ ನಿತ್ಯಸತ್ಯ.

Trending videos

Back to Top