ವಾಹನ ಸವಾರರೇ ಗಮನಿಸಿ…ಫಾಸ್ಟ್ ಟ್ಯಾಗ್ ಕಡ್ಡಾಯ ಅಂತಿಮ ಗಡುವು ಮತ್ತೆ ವಿಸ್ತರಣೆ
ಈ ಮೊದಲು ಕೇಂದ್ರ ಸರ್ಕಾರ 2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು.
Team Udayavani, Dec 31, 2020, 1:40 PM IST
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಅಂತಿಮ ದಿನಾಂಕದ ಗಡುವನ್ನು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಗುರುವಾರ (ಡಿಸೆಂಬರ್ 31, 2020) ಮತ್ತೆ ವಿಸ್ತರಿಸಿದೆ.
ಈ ಮೊದಲು ಕೇಂದ್ರ ಸರ್ಕಾರ 2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು. ಇದೀಗ 2021ರ ಜನವರಿ 1ರ ಅಂತಿಮ ಗಡುವನ್ನು 2021ರ ಫೆಬ್ರುವರಿ 15ರವರೆಗೆ ವಿಸ್ತರಿಸಿದೆ.
ಜನವರಿ 1ರಿಂದ ಟೋಲ್ ಗೇಟ್ ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಎಲ್ಲಾ ವಾಣಿಜ್ಯ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಗತ್ಯ ಎಂದು ಹೇಳಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಟಣೆ ಪ್ರಕಾರ, ಪ್ರಸ್ತುತ ದೇಶಾದ್ಯಂತ ಒಟ್ಟು 75ರಿಂದ 80ರಷ್ಟು ಫಾಸ್ಟ್ ಟ್ಯಾಗ್ ಮೂಲಕ ಪಾವತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರುವರಿ 15ರಿಂದ ಸಂಪೂರ್ಣವಾಗಿ ಟೋಲ್ ಗೇಟ್ ಗಳಲ್ಲಿ ನಗದು ರಹಿತವಾಗುವ ಮೂಲಕ ಶೇ.100ರಷ್ಟು ಫಾಸ್ಟ್ ಟ್ಯಾಗ್ ಮೂಲಕ ಪಾವತಿಯಾಗುವಂತೆಯಾಗಬೇಕು ಎಂದು ತಿಳಿಸಿದೆ.