
ದೇಶದಲ್ಲಿ ಜಿಎಸ್‌ಟಿ ಸಂಗ್ರಹ 1.49 ಲಕ್ಷ ಕೋಟಿ
2022ರ ಫೆಬ್ರವರಿಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.12 ಏರಿಕೆ
Team Udayavani, Mar 2, 2023, 7:35 AM IST

ಹೊಸದಿಲ್ಲಿ: ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣ ಏರಿಕೆಯ ಹಾದಿಯಲ್ಲಿಯೇ ಮುಂದುವರಿದಿದೆ. ಫೆಬ್ರವರಿಗೆ ಸಂಬಂಧಿಸಿದಂತೆ 1,49, 577 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಲಾಗಿದೆ. 2022ರ ಫೆಬ್ರವರಿಗೆ ಹೋಲಿಕೆ ಮಾಡಿದರೆ ಶೇ.12 ಹೆಚ್ಚಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಧನಾತ್ಮವಾಗಿ ಇದ್ದ ಕಾರಣ, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದ್ದರಿಂದ ಈ ಬೆಳವಣಿಗೆಯಾಗಿದೆ. ಸೆಸ್ ಸಂಗ್ರಹದಿಂದಲೇ 11,931 ಕೋಟಿ ರೂ.ಜಮೆಯಾಗಿದೆ. ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಸೆಸ್‌ನಿಂದ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ಸಂಗ್ರಹಿಸಲಾಗಿದೆ.
ಜನವರಿಯಲ್ಲಿ 1.57 ಲಕ್ಷ ಕೋಟಿ ರೂ., 2022ರ ಎಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿತ್ತು.
ದೇಶದ ಅರ್ಥ ವ್ಯವಸ್ಥೆಗೆ ಇದೊಂದು ಧನಾತ್ಮಕ ಸಂಕೇತವೆಂದು ಹಲವಾರು ಮಂದಿಗೆ ತೆರಿಗೆ ಕ್ಷೇತ್ರದ ವಿಶ್ಲೇಷಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆಯೂ ಅದಕ್ಕೆ ನೆರವಾಗಿದೆ ಎಂದು ಅವರ ಅಭಿಪ್ರಾಯವಾಗಿದೆ.
ಪ್ರಸಕ್ತ ವರ್ಷ ಅರ್ಥ ವ್ಯವಸ್ಥೆಗೆ
ಶೇ.5.5ರ ಬೆಳವಣಿಗೆ: ಮೂಡಿಸ್
ಹೊಸದಿಲ್ಲಿ/ಮುಂಬಯಿ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದಂತೆ ಭಾರತ ಶೇ.5.5ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ. ಹೀಗೆಂದು ಮೂಡಿಸ್ ಇನ್ವೆಸ್ಟರ್ ಸರ್ವಿಸ್ ಧನಾತ್ಮಕ ಭವಿಷ್ಯ ನುಡಿದಿದೆ. ಹಿಂದಿನ ಸಮೀಕ್ಷೆ ಪ್ರಕಾರ ದೇಶ ಶೇ.4.8ರ ದರದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಅಭಿ ಪ್ರಾಯಪಡಲಾಗಿತ್ತು.
ಬಜೆಟ್‌ನಲ್ಲಿ ಮೂಲ ಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ತೃಪ್ತಿದಾಯಕವಾಗಿರುವ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಲಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಇದಲ್ಲದೆ, ಅಮೆರಿಕ, ಕೆನಡಾ ಸೇರಿದಂತೆ ಹಲವು ಜಿ20 ರಾಷ್ಟ್ರಗಳಲ್ಲಿಯೂ ಕೂಡ ಅರ್ಥ ವ್ಯವಸ್ಥೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಮತ್ತೊಂದೆಡೆ, ದೇಶದಲ್ಲಿನ ಉತ್ಪಾದನಾ ಕ್ಷೇತ್ರ ಸೂಚ್ಯಂಕ (ಪಿಎಂಐ) ಫೆಬ್ರವರಿಗೆ ಸಂಬಂಧಿಸಿದಂತೆ ಸ್ಥಿರತೆ ಕಾಯ್ದುಕೊಂಡಿದೆ. ಜನವರಿಯಲ್ಲಿ 55.4ರಷ್ಟು ಇದ್ದ ಸೂಚ್ಯಂಕ ಕಳೆದ ತಿಂಗಳು 55.3ರಲ್ಲಿ ನಿಂತಿದೆ.
ಟಾಪ್ ನ್ಯೂಸ್
