ಚಂದ್ರಬಾಬು, ಪುತ್ರಗೆ ಗೃಹಬಂಧನ ವಿಧಿಸಿದ ಜಗನ್‌

Team Udayavani, Sep 12, 2019, 5:40 AM IST

ಹೈದರಾಬಾದ್‌: ರಾಜ್ಯ ಸರಕಾರದ ವಿರುದ್ಧ “ಚಲೋ ಆತ್ಮಕುರು’ ಎಂಬ ಅಭಿಯಾನ ನಡೆಸಲು ಯೋಜಿಸಿದ್ದ ಟಿಡಿಪಿ ಮುಖಂಡ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್‌ಗೆ ಆಂಧ್ರ ಪೊಲೀಸರು ಬುಧವಾರ ಗೃಹಬಂಧನ ವಿಧಿಸಿದ್ದಾರೆ.

ಅವರಿಗೆ ಮನೆಯಿಂದ ಹೊರಗೆ ಬರಲು ಅವಕಾಶ ನೀಡದ ಪೊಲೀಸರು, ನಾಯ್ಡು ಮನೆಯ ಗೇಟುಗಳಿಗೆ ಬೀಗ ಹಾಕಿದರು. ಅಷ್ಟೇ ಅಲ್ಲ, ನಾಯ್ಡು ಮನೆಗೆ ತೆರಳಲು ಯತ್ನಿಸಿದ ಹಲವು ಟಿಡಿಪಿ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮನೆಯ ಒಳಗಿನಿಂದಲೇ ಮಾತ ನಾಡಿದ ಚಂದ್ರಬಾಬು ನಾಯ್ಡು, ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ನಮ್ಮ ಪಕ್ಷದ ಹಲವು ಸಂಸದರು ಮತ್ತು ಶಾಸಕರನ್ನು ವಿವಿಧೆಡೆ ವಶಕ್ಕೆ ಪಡೆಯಲಾಗಿದೆ. ಹಲವರನ್ನು ಗೃಹಬಂಧನದಲ್ಲಿ ಇಡಲಾಗಿದೆ. ಇವೆಲ್ಲವೂ ಆಡಳಿತಗಾರರ ದುಷ್ಟ ಮನಃಸ್ಥಿತಿಯಿಂದಾಗಿ ನಡೆದಿವೆ ಎಂದು ಸಿಎಂ ವೈ.ಎಸ್‌.ಜಗನ್‌ಮೋಹನ ರೆಡ್ಡಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ವೈಎಸ್‌ಆರ್‌ ಕಾಂಗ್ರೆಸ್‌ನ ದೌರ್ಜನ್ಯ ದಿಂದ ತೊಂದರೆಗೆ ಒಳಗಾದ ಆತ್ಮಕುರು ಗ್ರಾಮದ ಜನರನ್ನು ಭೇಟಿ ಮಾಡಿಯೇ ತೀರು ತ್ತೇನೆ ಎಂದು ನಾಯ್ಡು ಕಿಡಿ ಕಾರಿ ದ್ದಾರೆ. ನಾಯ್ಡು ಆರೋಪದ ಪ್ರಕಾರ ಆತ್ಮಕುರು ಗ್ರಾಮದಿಂದ 125 ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಒಕ್ಕಲೆಬ್ಬಿಸ ಲಾಗಿದೆ. ಇದನ್ನು ಖಂಡಿಸಿ ಆ ಗ್ರಾಮಕ್ಕೆ ತೆರಳಿ ಪ್ರತಿಭಟನೆ ನಡೆಸಲು ನಾಯ್ಡು ಮುಂದಾದಾಗ ಏಕಾಏಕಿ ಅವರನ್ನು ಗೃಹಬಂಧನ ದಲ್ಲಿ ಇರಿಸಲಾಯಿತು.

ಈ ಮಧ್ಯೆ ಟಿಡಿಪಿ ರ್ಯಾಲಿಗೆ ಪ್ರತಿಕ್ರಿಯೆಯಾಗಿ ರ್ಯಾಲಿ ನಡೆಸಲು ಯತ್ನಿಸಿದ ಹಲವು ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡರನ್ನೂ ಪೊಲೀಸರು ಬಂಧಿಸಿದ್ದಾರೆ.

ರೆಡ್ಡಿ ಮತ್ತು ನಾಯ್ಡು ದ್ವೇಷಕ್ಕೆ 35 ವರ್ಷ!
ನಾಯ್ಡು ಮತ್ತು ರೆಡ್ಡಿ ಕುಟುಂಬದ ಮಧ್ಯದ ದ್ವೇಷ ಈಗಿನದ್ದಲ್ಲ. ಕಳೆದ 35 ವರ್ಷ ಗಳಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಈ ದ್ವೇಷ ಹೊರ ಬರುತ್ತಲೇ ಇದೆ. ಜಗನ್‌ ಮೋಹನ ರೆಡ್ಡಿ ತಂದೆ ವೈಎಸ್‌ ರಾಜಶೇಖರ ರೆಡ್ಡಿ ಮತ್ತು ನಾಯ್ಡು ಒಟ್ಟಿಗೆ ರಾಜಕೀಯಕ್ಕೆ ಕಾಂಗ್ರೆಸ್‌ ಮೂಲಕ ಬಂದವ ರಾದರೂ ಎನ್‌.ಟಿ. ರಾಮರಾವ್‌ ಸರಕಾರವಿದ್ದಾಗ 1984ರಲ್ಲಿ ನಾಯ್ಡು ತನ್ನ ಮಾವನ ಪಕ್ಷ ಟಿಡಿಪಿಗೆ ಹಾರಿದ್ದರು. ಆಗ ನಾಯ್ಡುಗೆ ಪ್ರತಿಸ್ಪರ್ಧಿಯಾಗಿ ವೈಎಸ್‌ಆರ್‌ ಕಂಡಿದ್ದರು. 1999ರಲ್ಲಿ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರಕಾರದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ನಾಯ್ಡು 2004ರಲ್ಲಿ ಹೀನಾಯ ವಾಗಿ ಸೋತಿದ್ದರು. ಆಗ ವೈಎಸ್‌ಆರ್‌ ಸರಕಾರದ ವಿರುದ್ಧ ಪ್ರತಿ ದಿನವೂ ನಾಯ್ಡು ವಾಗ್ಧಾಳಿ ನಡೆಸುತ್ತಿದ್ದರು.

2009ರಲ್ಲಿ ರಾಜಶೇಖರ ರೆಡ್ಡಿ ಸಾವಿನ ಬಳಿಕ ಹಾಗೂ ರಾಜ್ಯ ವಿಭಜನೆಯ ಅನಂತರ ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ಲಾಭ ಬಳಸಿಕೊಂಡ ನಾಯ್ಡು, ಜಗನ್‌ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖ ಲಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತದೆ. ಇದರಿಂದ ಜಗನ್‌ ಜೈಲಿಗೂ ಹೋಗುವಂತಾಗಿತ್ತು. ಅಲ್ಲೇ ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಲು ಜಗನ್‌ ನಿರ್ಧರಿಸಿದ್ದರು. 2018ರಲ್ಲಿ ಅಭೂತಪೂರ್ವ ಜಯ ಸಾಧಿಸಿದ ಜಗನ್‌ ಅಧಿಕಾರಕ್ಕೇರಿದ ದಿನದಿಂದಲೇ ನಾಯ್ಡು ವಿರುದ್ಧ ಕತ್ತಿ ಮಸೆಯಲು ಆರಂಭಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ