ಕೇರಳ ಬ್ಯಾಂಕ್‌ಗಳಲ್ಲಿ ಕರಗುತ್ತಿದೆ ಅನಿವಾಸಿ ಠೇವಣಿ ಪ್ರಮಾಣ!
ಕೊರೊನಾ, ಉದ್ಯೋಗ ನಷ್ಟದಿಂದ ಉಂಟಾದ ಪ್ರಭಾವ
Team Udayavani, Jan 18, 2022, 6:30 AM IST
ಕೊಚ್ಚಿ: ಕೇರಳದ ಎಲ್ಲಾ ರೀತಿಯ ಬ್ಯಾಂಕ್‌ಗಳಲ್ಲಿ ವಿದೇಶಗಳಲ್ಲಿರುವ ಆ ರಾಜ್ಯಗಳ ಮಂದಿ ಕಳುಹಿಸುತ್ತಿರುವ ಹಣದ ಮೊತ್ತ ಗಣನೀಯವಾಗಿ ಇಳಿಕೆಯಾದ ಅಂಶ ಬೆಳಕಿಗೆ ಬಂದಿದೆ. ಇದೇ ಮೊದಲ ಬಾರಿಗೆ ಇಂಥ ಕಳವಳಕಾರಿಯಾಗಿರುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಹೇಳಲಾಗಿದೆ.
ಶನಿವಾರ ಬೆಳಕಿಗೆ ಬಂದ ಮಾಹಿತಿ ಪ್ರಕಾರ 593 ಕೋಟಿ ರೂ.ಗಳಿಂದ 2,35,897 ಕೋಟಿ ರೂ. ವರೆಗೆ ಅನಿವಾಸಿ ಕೇರಳಿಗರಿಂದ ಬ್ಯಾಂಕ್‌ಗಳಿಗೆ ಜಮೆಯಾಗುತ್ತಿದ್ದ ಠೇವಣಿ ಮೊತ್ತ ಇಳಿಕೆಯಾಗಿದೆ. ಇದು 2021ರ ಸೆಪ್ಟೆಂಬರ್ ಮುಕ್ತಾಯದ ವರೆಗಿನ ಸಾಂಖ್ಯಿಕ ಮಾಹಿತಿಯಾಗಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ವಿವಿಧ ಹಂತದ ಕೆಲಸಗಳಲ್ಲಿದ್ದವರು ಉದ್ಯೋಗ ನಷ್ಟದಿಂದ ರಾಜ್ಯಕ್ಕೆ ಆಗಮಿಸಿದ್ದಾರೆ. ಅದರ ಪ್ರಭಾವದಿಂದಾಗಿ ಹೀಗಾಗಿದೆ. 2021ರ ಜುಲೈ ವೇಳೆಗೆ ಸರಿ ಸುಮಾರು 15 ಲಕ್ಷ ಮಂದಿ ಕೇರಳೀಯರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 10.45 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡ ಕಾರಣ ವಾಪಸ್ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಏರಿಕೆಯಾಗುತ್ತಿತ್ತು: ಕೊಲ್ಲಿ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಕೇರಳದಿಂದ ಹಲವು ಸ್ತರಗಳ ಉದ್ಯೋಗಗಳಿಗಾಗಿ ತೆರಳುತ್ತಿದ್ದರು. ಇದರಿಂದಾಗಿ 2018 ಸೆಪ್ಟೆಂಬರ್ 2018ರಲ್ಲಿ 54,867 ಕೋಟಿ ರೂ. ಇದ್ದ ಅನಿವಾಸಿ ಠೇವಣಿ ಮೊತ್ತ 2021 ಜೂನ್‌ಗೆ 2,36,490 ಕೋಟಿ ರೂ. ವರೆಗೆ ಏರಿಕೆಯಾಗಿತ್ತು.
ಇದನ್ನೂ ಓದಿ:ಕೋವಿಡ್ ಹೆಚ್ಚಳ ಆಸ್ಪತ್ರೆಗಳಲ್ಲಿ ಸೌಕರ್ಯಗಳ ಮಾಹಿತಿ ಪಡೆದ ಶಾಸಕ ಪರಣ್ಣ
ವ್ಯತ್ಯಾಸವಿದೆ:
ಅನಿವಾಸಿ ಠೇವಣಿ ಮತ್ತು ಅನಿವಾಸಿ ಕೇರಳಿಗರು ಕುಟುಂಬಗಳಿಗೆ ಕಳುಹಿಸುವ ಮೊತ್ತಕ್ಕೆ ವ್ಯತ್ಯಾಸವಿದೆ. ಅನಿವಾಸಿ ಠೇವಣಿ ಎಂದರೆ ವಿದೇಶಿ ಕರೆನ್ಸಿ ಮೂಲಕ ಅನಿವಾಸಿ ಕೇರಳಿಗ ಬ್ಯಾಂಕ್‌ನಲ್ಲಿ ಇರಿಸುವ ಮೊತ್ತ. ಅದು ಅವಧಿ ಮುಕ್ತಾಯದ ಬಳಿಕ ಅದನ್ನು ಹಿಂಪಡೆಯಲಾಗುತ್ತದೆ. ರೆಮಿಟೆನ್ಸ್ ಅಥವಾ ಹಣ ಜಮೆ ಎಂದರೆ, ವಿದೇಶಗಳಗಳಲ್ಲಿರುವ ಕೇರಳಿಗರು ತಮ್ಮವರ ಅಗತ್ಯಕ್ಕಾಗಿ ಕಳುಹಿಸುವ ಹಣ.
ಪುಣೆಯ ಫ್ಲೇಮ್ ವಿವಿಯ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ಬಾಲನ್ ಮಾತನಾಡಿ ಕೊರೊನಾದಿಂದಾಗಿ ಎಲ್ಲವೂ ಪ್ರತಿಕೂಲವಾಗಿದೆ. ಉದ್ಯೋಗ ನಷ್ಟದಿಂದಾಗಿ ಠೇವಣಿ ಇರಿಸಿದ್ದನ್ನೂ ತೆಗೆದು ಖರ್ಚು ಮಾಡುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದ್ದಾರೆ.
ಕೇರಳದ ಬ್ಯಾಂಕ್‌ಗಳಲ್ಲಿ ಅನಿವಾಸಿ ಠೇವಣಿ
ತಿಂಗಳು ಮತ್ತು ವರ್ಷ ಮೊತ್ತ (ಕೋಟಿ ರೂ.ಗಳಲ್ಲಿ)
ಸೆಪ್ಟೆಂಬರ್ 2021 2,35,897 (- 593)
ಜೂನ್ 2021 2,36,490 (- 6,854)
ಮಾರ್ಚ್ 2021 2,29,636 (- 2,205)