ಸೆಕ್ಯುರಿಟಿ ಗಾರ್ಡ್ ಗುಂಡೇಟಿಗೆ ಗುರಿಯಾಗಿದ್ದ ಜಡ್ಜ್ ಪುತ್ರನ ಸಾವು
Team Udayavani, Oct 23, 2018, 11:23 AM IST
ಗುರುಗ್ರಾಮ : ಕಳೆದ ವಾರ ಗುರುಗ್ರಾಮದಲ್ಲಿ ನ್ಯಾಯಾಧೀಶರ ಸೆಕ್ಯುರಿಟಿ ಗಾರ್ಡ್ ನ ಗುಂಡೆಸೆತಕ್ಕೆ ಗುರಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಡಿಶನಲ್ ಸೆಶನ್ಸ್ ನ್ಯಾಯಾಧೀಶ ಕೃಷನ್ ಕಾಂತ್ ಶರ್ಮಾ ಅವರ ಪುತ ಧ್ರುವ ಇಂದು ಮಂಗಳವಾರ ಕೊನೆಯುಸಿರೆಳೆದಿರುವುದಾಗಿ ವರದಿಗಳು ತಿಳಿಸಿವೆ.
ತಲೆಗೆ ಗುಂಡೇಟು ಪಡೆದು ಗಂಭೀರವಾಗಿ ಗಾಯಗೊಂಡಿದ್ದ ಧ್ರುವ ಬ್ರೈನ್ ಡೆಡ್ ಆಗಿರುವುದಾಗಿ ವೈದ್ಯರು ಈ ಮೊದಲೇ ಘೋಷಿಸಿದ್ದರು. ಇಂದು ಮಂಗಳವಾರ ಬೆಳಗ್ಗೆ ಆತ ಕೊನೆಯುಸಿರೆಳೆದ ಎಂದು ವೈದ್ಯರು ಪ್ರಕಟಿಸಿದರು ಎಂದು ಎಎನ್‌ಐ ವರದಿ ಮಾಡಿದೆ.
ಕಳೆದ ಅ.13ರಂದು ಗುರುಗ್ರಾಮದ ಜನದಟ್ಟನೆಯ ಮಾರುಕಟ್ಟೆ ಪ್ರದೇಶದಲ್ಲಿ ನ್ಯಾಯಾಧೀಶರ ಖಾಸಗಿ ಸೆಕ್ಯುರಿಟಿ ಗಾರ್ಡ್, ನ್ಯಾಯಾಧೀಶರ ಹೆಂಡತಿ ಮತ್ತು ಪುತ್ರನ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದ. ಅದಾಗಿ ಮರುದಿನ ಭಾನುವಾರವೇ ನ್ಯಾಯಾಧೀಶರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮೃತಪಟ್ಟಿದ್ದರು.
ಗನ್‌ಮ್ಯಾನ್ ಮಹಿಪಾಲ್ ಸಿಂಗ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಈತನನ್ನು ಎರಡು ವರ್ಷಗಳಿಂದ ನ್ಯಾಯಾಧೀಶರ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನ್ಯಾಯಾಧೀಶರ ಕುಟುಂಬ ಸದಸ್ಯರ ತನ್ನೊಂದಿಗೆ ತೋರುತ್ತಿದ್ದ ದುರ್ವರ್ತನೆಯಿಂದಾಗಿ ಈತ ಮಾನಸಿಕ ಒತ್ತಡಕ್ಕೆ ಗುರಿಯಾಗಿ ಈ ಕೃತ್ಯ ಎಸಗಿದ್ದ ಎಂದು ಅನಂತರ ತನಿಖೆಯಿಂದ ಗೊತ್ತಾಗಿತ್ತು.