ಸೌತೇ ಕಾಯಿ ಸಿಪ್ಪೆಯಲ್ಲೇ ಫುಡ್ ಪ್ಯಾಕೇಜಿಂಗ್!
Team Udayavani, Nov 18, 2020, 6:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸಲಾಡ್ ತಯಾರಿಸಿದ ನಂತರ ನೀವು ಸೌತೆಕಾಯಿಯ ಸಿಪ್ಪೆಯನ್ನು ಕಸದಬುಟ್ಟಿಗೆ ಎಸೆಯುತ್ತಿದ್ದೀರಾ? ಮುಂದಿನ ದಿನಗಳಲ್ಲಿ ಈ ಸಿಪ್ಪೆಯೇ ಆಹಾರ ಪದಾರ್ಥಗಳ ಪ್ಯಾಕೇಜ್ ಆಗಿ, ನಿಮ್ಮ ಅಡುಗೆ ಮನೆಗೇ ಹಿಂದಿರುಗುವ ಸಾಧ್ಯತೆ ಇದೆ!
ಐಐಟಿ ಖರಗ್ಪುರದ ಸಂಶೋಧಕರು ಇಂಥದ್ದೊಂದು ಪರಿಸರ ಸ್ನೇಹಿ ಆವಿಷ್ಕಾರ ಮಾಡಿದ್ದಾರೆ. ಐಐಟಿ ಸಂಶೋಧಕರ ಪ್ರಕಾರ, ಸೌತೆ ಕಾಯಿಯ ಸಿಪ್ಪೆಯು ಇತರೆ ತರಕಾರಿಯ ಸಿಪ್ಪೆಗಳಿಗಿಂತ ಹೆಚ್ಚಿನ ಸೆಲ್ಯುಲೋಸ್ ಅಂಶವನ್ನು ಹೊಂದಿರುತ್ತದೆ. ಈ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ನ್ಯಾನೋಕ್ರಿಸ್ಟಲ್‌ಗಳನ್ನು ಬಳಸಿ ಆಹಾರ ಪ್ಯಾಕೇಜಿಂಗ್ ವಸ್ತುಗಳನ್ನು ತಯಾರಿಸಬಹುದಾಗಿದ್ದು, ಪ್ಯಾಕೇಜಿಂಗ್ ಜೈವಿಕವಾಗಿ ವಿಘಟನೆಯಾಗುವುದರಿಂದ ಪರಿಸರಕ್ಕೂ ಪೂರಕವಾಗುತ್ತದೆ. ಅಲ್ಲದೇ ಸೌತೆಕಾಯಿಯ ಸಿಪ್ಪೆಯಿಂದ ತಯಾರಿಸಲಾದ ಪ್ಯಾಕೇಜಿಂಗ್‌ನಲ್ಲಿ ಆಮ್ಲಜನಕದ ಪ್ರವೇಶ ಸಾಧ್ಯತೆಯೂ ಕಡಿಮೆಯಿರುವ ಕಾರಣ, ಒಳಗಿನ ಆಹಾರೋತ್ಪನ್ನಗಳೂ ಸುರಕ್ಷಿತವಾಗಿರುತ್ತವಂತೆ.