80 ವರ್ಷಗಳ ದೇಗುಲ ನಿರ್ಬಂಧಕ್ಕೆ ತೆರೆ! 200ಕ್ಕೂ ಅಧಿಕ ದಲಿತರ ಪ್ರವೇಶ
Team Udayavani, Jan 31, 2023, 7:30 AM IST
ಚೆನ್ನೈ: ಕಳೆದ 8 ದಶಕಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಿರ್ಬಂಧವಿದ್ದ ದೇಗುಲವನ್ನು ಎಸ್‌ಸಿ/ಎಸ್‌ಟಿ ವರ್ಗದ 200ಕ್ಕೂ ಅಧಿಕ ಮಂದಿ ಪ್ರವೇಶಿಸಿದ್ದಾರೆ. ಈ ಮೂಲಕ ತಮಿಳುನಾಡಿನ ತಿರುವಣ್ಣಾ ಮಲೈ ಜಿಲ್ಲೆ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ.
80 ವರ್ಷಗಳ ಇತಿಹಾಸ ಹೊಂದಿರುವ ದೇವಿ ದೇಗುಲವೊಂದಕ್ಕೆ ದಲಿತರು ಪ್ರವೇಶಿಸದಂತೆ ಮೊದಲಿನಿಂದಲೂ ನಿರ್ಬಂಧವಿತ್ತು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದ ಬಳಿಕ, ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ,ದೇಗುಲ ಆಡಳಿತ ಮಂಡಳಿ ಜತೆಗೆ ಸಭೆ ನಡೆಸಲಾಯಿತು. ಜಿಲ್ಲಾ ಎಸ್‌ಪಿ ಡಾ.ಕೆ. ಕಾರ್ತಿಕೇಯನ್ ಸ್ಥಳೀಯರ ಜತೆಗೂ ಮಾತುಕತೆ ನಡೆಸಿ, ಜ.30ರ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತೊಲಗಿಸುವ ಸಂಕಲ್ಪದೊಂದಿಗೆ 400 ಪೊಲೀಸರ ಭದ್ರತೆಯೊಂದಿಗೆ ದಲಿತರ ದೇಗುಲ ಪ್ರವೇಶವನ್ನು ಖಾತರಿ ಪಡಿಸಿಕೊಂಡಿದ್ದಾರೆ.
ದಲಿತರ ಸಂತಸ:
ದೇಗುಲ ಪ್ರವೇಶಿಸಿದ ದಲಿತ ಮಹಿಳೆಯೊಬ್ಬರು,ತಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದರೂ, ದೇಗುಲದ ಒಳಗಿರುವ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.ಇಂದು ಆ ಅವಕಾಶ ಸಿಕ್ಕಿದೆ. ದೇಗುಲ ಪ್ರವೇಶಿಸಿದ್ದು, ನಾನೊಂದು ಮಗುವಿಗೆ ಜನ್ಮ ನೀಡಿದೆ ಎನ್ನುವಷ್ಟು ಸಂತಸವನ್ನು ತಂದಿದೆ ಎಂದಿದ್ದಾರೆ.
ಮೇಲ್ವರ್ಗದವರ ಪ್ರತಿಭಟನೆ
ದಲಿತರು ದೇಗುಲ ಪ್ರವೇಶಿಸುವುದನ್ನು ವಿರೋಧಿಸಿ ಮೇಲ್ವರ್ಗದ 750ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ಪ್ರತ್ಯೇಕ ದೇಗುಲ ಕಟ್ಟಿಸಿಕೊಳ್ಳಲು ದಲಿತರಿಗೆ ಹಣ, ಭೂಮಿಯನ್ನು ನೀಡಿದ್ದೇವೆ. ಈಗ ಅವರು ದೇಗುಲ ಪ್ರವೇಶಿಸುವ ಅಗತ್ಯವೇನಿದೆ?ಅವರ ಪ್ರವೇಶದಿಂದ ದೇಗುಲ ಅಪವಿತ್ರವಾಗಿದೆ ಎಂದಿದ್ದಾರೆ.