ಅಮರಾವತಿಗೆ ಜಗನ್‌ ಸಾರಥಿ

ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಧೂಳಿಪಟ

Team Udayavani, May 24, 2019, 6:00 AM IST

ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಜಗಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಟಿಡಿಪಿ ಹೀನಾಯ ಸೋಲು ಕಂಡಿದೆ. 175 ಕ್ಷೇತ್ರಗಳ ವಿಧಾನಸಭೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಮೂರನೇ ನಾಲ್ಕರಷ್ಟು ಬಹುಮತ ಪಡೆದು, ಅಧಿಕಾರದ ಗದ್ದುಗೆಗೆ ಏರುತ್ತಿದೆ. ಆಡಳಿತ ವಿರೋಧಿ ಅಲೆಯ ಬೆನ್ನೇರಿದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ (ಟಿಪಿಡಿ)ಗೆ 26 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿದ್ದು, ದಯನೀಯ ಸೋಲು ಅನುಭವಿಸಿದೆ. ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದು, ಅವರು ರಾಜೀನಾಮೆ ಅಂಗೀಕರಿಸಿದ್ದಾರೆ.

ಈ ಮಧ್ಯೆ, ಜನಸೇನಾ ಪಕ್ಷದ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಖ್ಯಾತ ನಟ ಹಾಗೂ ಜನಸೇನಾ ಸಂಸ್ಥಾಪಕ ಅಧ್ಯಕ್ಷ ಪವನ್‌ ಕಲ್ಯಾಣ್‌ ಅವರು ಭೀಮಾವರಂ ಹಾಗೂ ಗಾಜುವಾಕಾ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಸೋಲಿನ ರುಚಿ ಅನುಭವಿಸಿದ್ದು, ಅವರ ಪಕ್ಷ 1 ಸ್ಥಾನ ಗಳಿಸಲಷ್ಟೆ ಶಕ್ತವಾಗಿದೆ.

ಪುಲಿವೆಂದುಲ ಗೆದ್ದ ಆಂಧ್ರ ಹುಲಿ: ಈ ಮಧ್ಯೆ, ಕಡಪ ಜಿಲ್ಲೆಯ ಪುಲಿವೆಂದುಲು ವಿಧಾನಸಭಾ ಕ್ಷೇತ್ರದಲ್ಲಿ ಜಗನ್‌ ಅವರು 90,543 ಮತಗಳ ಅಂತರದಿಂದ ಟಿಡಿಪಿಯ ಸತೀಶ್‌ ರೆಡ್ಡಿ ಅವರನ್ನು ಸೋಲಿಸಿದ್ದಾರೆ. ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ ಕಾಂಗ್ರೆಸ್‌ನ ಕೆ.ಚಂದ್ರಮೌಳಿ ಅವರನ್ನು 29,993 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದೇ ವೇಳೆ, ಚಂದ್ರಬಾಬು ನಾಯ್ಡು ಪುತ್ರ, ಟಿಡಿಪಿ ಅಧ್ಯಕ್ಷ ಕೆ.ಕಲಾ ವೆಂಕಟರಾವ್‌, ವಿಧಾನಸಭಾಧ್ಯಕ್ಷ ಕೊಡೆಲಾ ಶಿವಪ್ರಸಾದ ರಾವ್‌ ಸೇರಿದಂತೆ ಟಿಡಿಪಿಯ ಖ್ಯಾತನಾಮರು ಸೋಲಿನ ರುಚಿ ಕಂಡಿದ್ದಾರೆ. ಚಂದ್ರಬಾಬು ನಾಯ್ಡು ಪುತ್ರ, ಐಟಿ ಸಚಿವ ನಾರಾ ಲೋಕೇಶ್‌ ಅವರು ಮಂಗಲಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ನಂದಮೂರಿ ಬಾಲಕೃಷ್ಣ ಅವರು ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ
ಪಕ್ಷದ ಗೆಲುವಿನ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಗನ್‌, ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದಕ್ಕಾಗಿ ಮೋದಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ತಮ್ಮ ಹೋರಾಟ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು. ಪಕ್ಷ ರಾಜ್ಯದಲ್ಲಿ ಜಯಭೇರಿ ಬಾರಿಸುತ್ತಿದ್ದಂತೆ ಜಗನ್‌ಗೆ ದೂರವಾಣಿ ಕರೆ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌, ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಅವರ ನೇತೃತ್ವದಲ್ಲಿ ಆಂಧ್ರ ಅಭಿವೃದ್ಧಿ ಪಥದತ್ತ ಸಾಗುವ ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ, ಆಂಧ್ರದಲ್ಲಿ ತಮ್ಮ ಪಕ್ಷವನ್ನು ವಿಜಯದತ್ತ ಕೊಂಡೊಯ್ದ ಜಗನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ

ರಾಜಕೀಯ ಸಂಘರ್ಷದಲ್ಲಿ ಹೊರಬಂದ ‘ಉಲ್ಕಾ ಶಿಲೆ’
ಹೈದರಾಬಾದ್‌: ಯದುಗುರಿ ಸಾಂದಿಂತಿ ಜಗನ್‌ ಮೋಹನ್‌ ರೆಡ್ಡಿ, ಕಳೆದ ಒಂದು ದಶಕದಲ್ಲಿ ನಡೆದ ರಾಜಕೀಯ ಸಂಘರ್ಷದಲ್ಲಿ ಸಿಡಿದು ಹೊರ ಬಂದ ‘ಉಲ್ಕಾ ಶಿಲೆ’.

ಮಾಜಿ ಮುಖ್ಯಮಂತ್ರಿಯ ಮಗನಾಗಿದ್ದರೂ ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಿ ಹೊರಹೊಮ್ಮಲು ಅವರು ಒಂದು ದಶಕ ಕಾಯಬೇಕಾಯಿತು. ಈ ಸುದೀರ್ಘ‌ ಅವಧಿಯಲ್ಲಿ ಜಗನ್‌ ಮೋಹನ್‌ ರೆಡ್ಡಿಯವರ ಹಾದಿ ಅಕ್ಷರಶ: ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಅದೆಲ್ಲವನ್ನೂ ಮೀರಿ ಅಂತಿಮವಾಗಿ ಗುರುವಾರ ಅವರು ತಮ್ಮ ಗುರಿ ತಲುಪಿದ್ದಾರೆ.

ಬೆಂಗಳೂರಿನ ನಂಟು: ಮೂಲತ: ಜಗನ್‌ ಮೋಹನ್‌ ರೆಡ್ಡಿ ಒಬ್ಬ ವ್ಯಾಪಾರಿ. ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಉದ್ಯಾನ ನಗರಿಯೊಂದಿಗೆ ಅವರು ಅವಿನಾಭಾವ ನಂಟು ಹೊಂದಿದ್ದಾರೆ. ಈ ಮಧ್ಯೆ, ತಂದೆ ರಾಜಶೇಖರ್‌ ರೆಡ್ಡಿ, ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ಮಗನನ್ನು ರಾಜಕೀಯಕ್ಕೆ ಕರೆ ತಂದರು. ತಂದೆಯ ಸೂಚನೆಯಂತೆ ಹಾಗೂ ಅವರ ಪ್ರಭಾವದಲ್ಲಿ 2009ರಲ್ಲಿ ಕಡಪ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಜಗನ್‌ ಮೋಹನ್‌ ರೆಡ್ಡಿಯ ರಾಜಕೀಯ ಪ್ರವೇಶವಾಯಿತು. ಇದಾಗಿ ಆರು ತಿಂಗಳಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ ತಂದೆಯ ಅಕಾಲಿಕ ಮರಣ ದೊಡ್ಡ ಆಘಾತ ನೀಡಿತು.

ನಂತರದಲ್ಲಿ ರಾಜಶೇಖರ್‌ ರೆಡ್ಡಿ ಅವರ ಉತ್ತರಾಧಿಕಾರಿ ಹಾಗೂ ಆಂಧ್ರಪ್ರದೇಶ ಮುಂದಿನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಎಂಬ ಕೂಗು ಜನರಿಂದ ಕೇಳಿ ಬಂದಿತ್ತು. ಆದರೆ, ಆ ಸ್ಥಾನಕ್ಕೆ ಕಾಂಗ್ರೆಸ್‌ ಆಯ್ಕೆ ಮಾಡಿದ್ದು ಕೆ.ರೋಸಯ್ಯ ಅವರನ್ನು. ಆಗ ಅಸಮಾಧಾನದ ಕಿಡಿ ಹತ್ತಿತು. ಇಲ್ಲಿಂದ ಯುವ ನಾಯಕನ ರಾಜಕೀಯ ಜೀವನ ಮತ್ತೂಂದು ತಿರುವು ಪಡೆದುಕೊಂಡಿತು. ಜಗನ್‌ ಮೋಹನ್‌ ರೆಡ್ಡಿ ನಡೆಸಿದ ‘ಒದರ್ಪು ಯಾತ್ರೆ’ ಬಂಡಾಯದ ಕಿಡಿ ಹೊತ್ತಿಸಿತು. ಈ ವೇಳೆ, ಕಾಂಗ್ರೆಸ್‌ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಪಕ್ಷವೇ ವೈಎಸ್‌ಆರ್‌ಸಿಪಿ.

ಈ ಮಧ್ಯೆ ಅಕ್ರಮ ಆಸ್ತಿ ಸೇರಿದಂತೆ ಜಗನ್‌ ಮೋಹನ್‌ ವಿರುದ್ಧ ಸುಮಾರು 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಯಿತು. ಪ್ರಕರಣಗಳ ಮೇಲೆ ಸಿಬಿಐ ತನಿಖೆ, ಜೈಲು ಪಾಲು ಎಲ್ಲವೂ ಈಗ ಇತಿಹಾಸ. ಈ ಸಂಘರ್ಷಗಳ ನಡುವೆ ಫಿನಿಕ್ಸ್‌ನಂತೆ ಎದ್ದು ಬಂದರು ಜಗನ್‌ ಮೋಹನ್‌. 2014ರಲ್ಲಿ ನಡೆದ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ 67 ಸೀಟುಗಳನ್ನು ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. 2019ರಲ್ಲಿ ಭಾರೀ ಬಹುಮತದೊಂದಿಗೆ ತಂದೆ ರಾಜಶೇಖರ್‌ ರೆಡ್ಡಿ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಗದ್ದುಗೆ ಏರಿದರು.

ಗೆದ್ದ ಪ್ರಮುಖರು
•ಎನ್‌. ಚಿನ್ನ ರಾಜಪ್ಪ, (ಉಪ ಮುಖ್ಯಮಂತ್ರಿ, ಗೃಹ ಸಚಿವ) (ಟಿಡಿಪಿ) ಪೆಡ್ಡಪುರಮ್‌ •ಪಿನ್ನೇಲಿ ರಾಮಕೃಷ್ಣ ರೆಡ್ಡಿ, ಶಾಸಕ (ವೈಎಸ್‌ಆರ್‌ಸಿ) ಮಚೆರಲಾ •ಜೋಗಿ ರಮೇಶ, ಮಾಜಿ ಶಾಸಕ, ಪೆದ್ದಾನಾ.

ಸೋತ ಪ್ರಮುಖರು

•ಕೊಲ್ಲು ರವೀಂದ್ರ, (ಕಾನೂನು ಸಚಿವ) ಟಿಡಿಪಿ-ಮಚಿಲಿಪಟ್ಟಣಂ •ಮಂಡಲಿ ಬುದ್ಧ ಪ್ರಸಾದ್‌ (ಉಪ ವಿಧಾನ ಸಭಾಧ್ಯಕ್ಷ )- ಟಿಡಿಪಿ-ಅವನಿಗಡ್ಡ •ಉಪ್ಪುಲೆಟ್ಟಿ ಕಲ್ಪನಾ,ಶಾಸಕಿ, (ಟಿಡಿಪಿ) ಪಾಮರು

30ಕ್ಕೆ ಪ್ರಮಾಣವಚನ

ವೈಎಸ್‌ಆರ್‌ ಕಾಂಗ್ರೆಸ್‌ನ ನೂತನ ಶಾಸಕರು ಮೇ 25ರಂದು ಸಭೆ ಸೇರಲಿದ್ದು, ಜನಗಮೋಹನ್‌ ಅವರನ್ನು ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಮೇ 30ರಂದು ವಿಜಯವಾಡದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಜಗನ್‌ ಅವರು ಆಂಧ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫ‌ಲಿತಾಂಶ ನಿರೀಕ್ಷಿತ ರೀತಿಯಲ್ಲಿದೆ.ಇದು ಆಂಧ್ರದ ಜನತೆಯ ವಿಜಯ.ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಹಾಗೂ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಚುನಾವಣೆ ವೇಳೆ ಆಂಧ್ರ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಜಗಮೋಹನ್‌ ರೆಡ್ಡಿ,
ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ. (ಫೇಸ್‌ಬುಕ್‌)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ