ಸೋಮವಾರದ ಒಳಗೆ ಹಾಟ್‌ಸ್ಪ್ರಿಂಗ್‌ನಿಂದ ಭಾರತ-ಚೀನ ಸೇನೆ ವಾಪಸ್
ತಾತ್ಕಾಲಿಕ ನಿರ್ಮಾಣ ಕಿತ್ತು ಹಾಕಲೂ ಒಮ್ಮತ
Team Udayavani, Sep 10, 2022, 7:45 AM IST
ನವದೆಹಲಿ: ಪೂರ್ವ ಲಡಾಖ್‌ನ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಸರಿಸುವ ಕೆಲಸ ಆರಂಭಿಸಿರುವ ಭಾರತ ಮತ್ತು ಚೀನಾ ರಾಷ್ಟ್ರಗಳು ಸೋಮವಾರದೊಳಗಾಗಿ ಆ ಪ್ರದೇಶದಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಸು ಪಡೆಯಲಿದೆ. ಹೀಗೆಂದು ಭಾರತದ ವಿದೇಶಾಂಗ ಸಚಿವಾಲಯ ಶುಕ್ರವಾರ ಮಾಹಿತಿ ಕೊಟ್ಟಿದ್ದಾರೆ.
ಗಸ್ತು ಕೇಂದ್ರ 15ರಲ್ಲಿ ಎರಡು ವರ್ಷಗಳಿಂದ ಉಭಯ ರಾಷ್ಟ್ರಗಳು ರಚಿಸಿಕೊಂಡಿದ್ದ ಎಲ್ಲ ತಾತ್ಕಾಲಿಕವಾಗಿ ರಚಿಸಲಾಗಿದ್ದ ಶಿಬಿರಗಳು ಸೇರಿದಂತೆ ಎಲ್ಲಾ ನಿರ್ಮಾಣಗಳನ್ನು ಕಿತ್ತು ಹಾಕಲಾಗುತ್ತದೆ ಹಾಗೂ ಅದನ್ನು ಪರಸ್ಪರ ಪರಿಶೀಲನೆ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳಲಾಗಿದೆ. ಸಂಘರ್ಷಕ್ಕೂ ಮೊದಲು ಆ ಪ್ರದೇಶವಿದ್ದ ಸ್ಥಿತಿಗೇ ಕೊಂಡೊಯ್ಯಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಹೆಲಿಪ್ಯಾಡ್ ರಚನೆ: ಅರುಣಾಚಲ ಪ್ರದೇಶದಲ್ಲಿ ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡು ಇರುವ ಎಲ್ಲಾ ಮುಂಚೂಣಿ ನೆಲೆಗಳಲ್ಲಿ ಹೆಲಿಪ್ಯಾಡ್‌ಗಳನ್ನು ರಚಿಸಲಾಗುವುದು ಎಂದು ಸೇನೆಯ ಹಿರಿಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಆ ಭಾಗದ ಯೋಧರೊಂದಿಗೆ ಸಂಪರ್ಕವನ್ನು ಸುಲಭಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಎಲ್ಲ ಮುಂಚೂಣಿ ನೆಲೆಗಳು ಹಾಗೂ ಸೇನಾ ನೆಲೆಗಳಿಗೆ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.