ನಾರ್ತನ್ ಆರ್ಮಿ ಮುಖ್ಯಸ್ಥರ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ ; ಎಲ್ಲರೂ ಸೇಫ್

Team Udayavani, Oct 24, 2019, 10:41 PM IST

ಶ್ರೀನಗರ: ಭಾರತೀಯ ಸೇನೆಯ ನಾರ್ತನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮತ್ತು ಇತರ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಫ್ಟರ್ ಒಂದು ತಾಂತ್ರಿಕ ಕಾರಣಗಳಿಂದ ಜಮ್ಮು ಕಾಶ್ಮೀರದ ಪೂಂಛ್ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.

ಸೇನೆಯ ಸುಧಾರಿತ ಲಘು ಹೆಲಿಕಾಫ್ಟರ್ ಧ್ರುವ ಉಧಮ್ ಪುರದಿಂದ ಪೂಂಛ್ ಕಡೆಗೆ ಹಾರಾಟ ನಡೆಸುತ್ತಿತ್ತು. ಈ ಹೆಲಿಕಾಫ್ಟರ್ ನಲ್ಲಿ ಲೆ. ಜ. ರಣಬೀರ್ ಸಿಂಗ್ ಸಹಿತ ಇತರ ಆರು ಜನರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಈ ಹೆಲಿಕಾಫ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಪೈಲಟ್ ಈ ಹೆಲಿಕಾಫ್ಟರನ್ನು ತುರ್ತು ಲ್ಯಾಂಡಿಂಗ್ ಮಾಡಿಸಿದ್ದಾರೆ.

ಮಂಡಿ-ಸ್ವಾಜ್ಯಿಯನ್ ರಸ್ತೆಯಲ್ಲಿರುವ ಬೇದಾರ್ ಪ್ರದೇಶದ ನದಿ  ಭಾಗದಲ್ಲಿ ಧ್ರುವ ಹೆಲಿಕಾಫ್ಟರ್ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ಪೂಂಛ್ ಜಿಲ್ಲೆಯ ಹಿರಿಯ ಪೊಲೀಸ್ ಮಹಾನಿರ್ದೇಶಕ ರಮೇಶ್ ಕುಮಾರ್ ಅಂಗ್ರಾಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತುರ್ತು ಲ್ಯಾಂಡಿಂಗ್ ಬಳಿಕ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದ ಲೆಫ್ಟಿನೆಂಟ್ ಜನರಲ್ ಸಹಿತ ಎಲ್ಲರನ್ನೂ ಉಧಮ್ ಪುರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೈಲಟ್ ಸಹಿತ ಹೆಲಿಕಾಫ್ಟರ್ ನಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ. ಮತ್ತು ಹೆಲಿಕಾಫ್ಟರ್ ನೆಲಕ್ಕ ಅಪ್ಪಳಿಸುವ ಸಂದರ್ಭದಲ್ಲಿ ಅದರ ಬಿಡಿ ಭಾಗವೊಂದು ಹಾರಿ ನಾಗರಿಕರೊಬ್ಬರ ಮೇಲೆ ಬಿದ್ದು ಅವರೂ ಸಹ ಗಾಯಗೊಂಡಿದ್ದಾರೆ.

ಗಡಿನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸುವ ಉದ್ದೇಶದಿಂದ ಈ ಹೆಲಿಕಾಫ್ಟರ್ ತೆರಳುತ್ತಿತ್ತು ಎಂದು ತಿಳಿದುಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ