370ನೇ ವಿಧಿ ರದ್ದುಗೊಂಡ 3 ತಿಂಗಳ ಬಳಿಕ ಕಾಶ್ಮೀರದಲ್ಲಿ ವ್ಯಾಪಾರ-ವಹಿವಾಟು ಆರಂಭ

Team Udayavani, Nov 19, 2019, 3:35 PM IST

ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ವಹಿವಾಟು ಆರಂಭಿಸಿದೆ ಎಂದು ವರದಿ ತಿಳಿಸಿದೆ.

370ನೇ ವಿಧಿ ರದ್ದುಪಡಿಸಿದ ನಂತರ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ಅಂಗಡಿಗಳು ಕೇವಲ ಬೆಳಗ್ಗೆ ಮತ್ತು ಸಾಯಂಕಾಲ ಕೆಲ ಗಂಟೆಗಳ ಕಾಲ ತೆರೆಯಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಕಳೆದ ಮೂರು ತಿಂಗಳ ಬಳಿಕ ಇದೀಗ ಮೊದಲ ಬಾರಿಗೆ ಹಗಲು ಹೊತ್ತಿನಲ್ಲಿ ಅಂಗಡಿ ತೆರೆದಿರುವುದಾಗಿ ಮಾಲೀಕರು ತಿಳಿಸಿದ್ದಾರೆ.

ಇದರಿಂದಾಗಿ ಕಳೆದ ಕೆಲವು ತಿಂಗಳಿನಿಂದ ಅನುಭವಿಸಿದ್ದ ನಷ್ಟವನ್ನು ಸರಿದೂಗಿಸಿಕೊಳ್ಳಬೇಕಾಗಿದೆ ಎಂದು ಶ್ರೀನಗರ್ ನೌಪೋರಾದ ಅಂಗಡಿ ಮಾಲೀಕ ಮುಝಾಫರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂಟರ್ನೆಟ್ ಸ್ಥಗಿತದಿಂದ ನಾವು ಹಿಂದಕ್ಕೆ ತಳ್ಳಲ್ಪಟ್ಟಿದ್ದೇವೆ ಎಂದು ಜಮ್ಮು ಕಾಶ್ಮೀರ್ ಪ್ಯಾಂಥರ್ಸ್ ಪಾರ್ಟಿ ಮುಖಂಡ ದೇವ್ ಸಿಂಗ್ ಐಎಎನ್ ಎಸ್ ಗೆ ತಿಳಿಸಿದ್ದಾರೆ. ಶ್ರೀನಗರ್ ಹಾಗೂ ದಕ್ಷಿಣ ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಸಾರಿಗೆ ಸಂಚಾರ ಇನ್ನೂ ಆರಂಭಗೊಂಡಿಲ್ಲ.

ಏತನ್ಮಧ್ಯೆ ಕಳೆದ ವಾರ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಶಾಲೆಗಳನ್ನು ತೆರೆಯಲು ಆದೇಶ ನೀಡಿತ್ತು. ಆದರೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದ ಪರಿಣಾಮ ಅದು ಕಾರ್ಯಗತವಾಗಿರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ