ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಘಟನೆ ಇಳಿಕೆ, ಗಡಿಯಲ್ಲಿ ಉಗ್ರರ ನುಸುಳುವಿಕೆ ಹೆಚ್ಚಳ: MHA

Team Udayavani, Dec 3, 2019, 3:57 PM IST

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಭಯೋತ್ಪಾದಕ ಸಂಬಂಧಿತ ಘಟನೆಗಳು ಇಳಿಕೆಯಾಗಿರುವುದಾಗಿ ಕೇಂದ್ರ ಗೃಹವ್ಯವಹಾರಗಳ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ.

ಆದರೆ ಗಡಿ ಪ್ರದೇಶದಲ್ಲಿ ನುಸುಳುಕೋರರ ಸಂಖ್ಯೆಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದೆ. ಆಗಸ್ಟ್ 5ರ ನಂತರ ಉಗ್ರಗಾಮಿ ಸಂಬಂಧಿತ ಘಟನೆಗಳು ಕಡಿಮೆಯಾಗಿವೆ. 2019ರ ಏಪ್ರಿಲ್ ನಿಂದ ಆಗಸ್ಟ್ 4ರವರೆಗೆ 106 ಭಯೋತ್ಪಾದನಾ ದಾಳಿ ಘಟನೆ ನಡೆದಿದ್ದು, ಆಗಸ್ಟ್ 5ರಿಂದ ನವೆಂಬರ್ 27ರವರೆಗೆ 88 ಘಟನೆಗಳು ನಡೆದಿರುವುದಾಗಿ ಕೇಂದ್ರದ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನುಸುಳುವಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಈ ಲಿಖಿತ ಉತ್ತರ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಗಡಿಯಲ್ಲಿ ಪ್ರಾಯೋಜಿತ ಮತ್ತು ಬೆಂಬಲಿತ ಭಯೋತ್ಪಾದನಾ ಸಂಘಟನೆಗಳ ಉದ್ದೇಶದ ಬಗ್ಗೆ ಭದ್ರತಾ ಏಜೆನ್ಸಿಗಳು ಗುಪ್ತಚರ ಇಲಾಖೆಯಿಂದ ಮಾಹಿತಿಯನ್ನು ಪಡೆಯುತ್ತಿವೆ. ಇದರಿಂದ ಸಂಭಾವ್ಯ ದಾಳಿಯನ್ನು ತಡೆಯಲು ಸಹಾಯಕವಾಗುತ್ತಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ