
ಹಿಂದೂ ನಾಯಕರ ಕೊಲ್ಲಲು ಉಗ್ರರ ಸಂಚು? ದೆಹಲಿ ಪೊಲೀಸರಿಂದ ಕಟ್ಟೆಚ್ಚರ
ಶಿರಚ್ಛೇದ ಪ್ರಕರಣದ ಬೆನ್ನಲ್ಲೇ ಈ ಶಂಕೆ
Team Udayavani, Jan 18, 2023, 7:35 AM IST

ನವದೆಹಲಿ:ಹಿಂದೂ ಸಮುದಾಯದ ಪ್ರಮುಖ ನಾಯಕರನ್ನು ಕೊಲ್ಲಲು ಭಯೋತ್ಪಾದಕರು ಸಂಚು ರೂಪಿಸಿರುವ ಅಂಶ ಬಯಲಾಗಿದೆ. ಈ ಘಾತಕ ಕೃತ್ಯಗಳನ್ನು ಎಸಗಲು ಉಗ್ರರು ದೇಶಕ್ಕೆ ಬಂದು ಅಡಗಿಕೊಂಡಿರುವ ಸಾಧ್ಯತೆಗಳು ಇವೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಅದಕ್ಕಾಗಿ “ಡೆಡ್ ಡ್ರಾಪ್ ಮೆಥಡ್’ ಎಂಬ ಹೊಸ ಮಾದರಿಯ ಸಂಚು ರೂಪಿಸಲಾಗಿದೆ. ಜ.26ರಂದು ಗಣರಾಜ್ಯ ದಿನ ಸಮೀಪಿಸುತ್ತಲೇ ಸಂಭಾವ್ಯ ಉಗ್ರ ದಾಳಿಯ ಬಗ್ಗೆ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 2 ದಿನಗಳ ಹಿಂದಷ್ಟೇ ಐಸಿಸ್ ಮಾದರಿಯಲ್ಲಿ ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿದ ಇಬ್ಬರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಕೆಲವು ಅಂಶಗಳು ಬಹಿರಂಗವಾಗಿವೆ.
8 ನಾಯಕರು ಟಾರ್ಗೆಟ್?:
ಪಂಜಾಬ್, ದೆಹಲಿಯಲ್ಲಿರುವ ಹಿಂದೂ ಸಮುದಾಯದ ನಾಯಕರೇ ಉಗ್ರರ ಗುರಿಯಾಗಿದ್ದಾರೆ. ಒಟ್ಟು 8 ಮಂದಿ ಅವರ ಪಟ್ಟಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಶಿರಚ್ಛೇದ ಪ್ರಕರಣದಲ್ಲಿ ಬಂಧಿತರಾಗಿರುವ ನೌಶಾದ್ ಮತ್ತು ಜಗ್‌ಜೀತ್ ಸಿಂಗ್ ಎಂಬ ಇಬ್ಬರಿಗೆ ಲಷ್ಕರ್, ಹರ್ಕತುಲ್ ಅನ್ಸಾರ್ ಉಗ್ರ ಸಂಘಟನೆಯ ನಿಕಟ ಸಂಪರ್ಕವಿತ್ತು. ಅವರಿಗೆ ಪಾಕ್ ಐಎಸ್‌ಐ, ಖಲಿಸ್ತಾನ ಸಂಘಟನೆಗಳ ಸಂಪರ್ಕ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಡೆಡ್ ಡ್ರಾಪ್ ಮೆಥಡ್:
ಮುಖಂಡರ ಹತ್ಯೆಗಾಗಿ ಡೆಡ್ ಡ್ರಾಪ್ ಮೆಥಡ್ ಎಂಬ ವ್ಯವಸ್ಥೆಯನ್ನು ಉಗ್ರ ಸಂಘಟನೆ ಜಾರಿಗೊಳಿಸುತ್ತಿದೆ. ಕೊಲೆ ಮಾಡಲು ನಿಯೋಜನೆಗೊಂಡವರಿಗೆ ಯಾವ ರೀತಿಯ ಆಯುಧಗಳು ಬೇಕು ಎಂಬುದನ್ನು ಸಿಗ್ನಲ್ ಆ್ಯಪ್ ಮೂಲಕ ಕಳುಹಿಸಲಾಗುತ್ತದೆ. ಅವುಗಳು ಇರುವ ಸ್ಥಳವನ್ನು ಗೂಗಲ್ ಮ್ಯಾಪ್ ಮೂಲಕ ಶೇರ್ ಮಾಡಲಾಗುತ್ತಿದೆ. ಆಯುಧಗಳನ್ನು ಒದಗಿಸಲು ಮತ್ತು ಅವುಗಳನ್ನು ಹಂತಕರಿಗೆ ನೀಡಲು ಇಬ್ಬರು ಇರುತ್ತಾರೆ. ಸದ್ಯ ಬಂಧನದಲ್ಲಿ ಇರುವ ಇಬ್ಬರಿಗೆ ಇದೇ ಮಾದರಿಯಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಲಾಗಿತ್ತು.
ಟಾಪ್ ನ್ಯೂಸ್
