ದೂದ್ ಸಾಗರ್ ನಲ್ಲಿ ನೀರು ಪಾಲಾಗಿದ್ದ ಪ್ರವಾಸಿಗನ ಶವ 17 ದಿನಗಳ ಬಳಿಕ ಪತ್ತೆ
Team Udayavani, Sep 24, 2022, 6:56 PM IST
ಪಣಜಿ: ಸೆಪ್ಟೆಂಬರ್ 5 ರಂದು ಗೋವಾ ಮತ್ತು ಕರ್ನಾಟಕದ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದ ಯುವಕನ ಶವವನ್ನು 17 ದಿನಗಳ ಬಳಿಕ ಪತ್ತೆ ಹಚ್ಚುವಲ್ಲಿ ಪೊಲೀಸರು ಮತ್ತು ರಕ್ಷಣಾ ತಂಡದ ಸಿಬಂದಿಗಳು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಸೋನಾಲಿ ಫೋಗಟ್ ಕೇಸ್; ಸರಕಾರ ಸಾಕ್ಷ್ಯ ನಾಶ ಮಾಡುತ್ತಿದೆ: ವಿಜಯ್ ಸರ್ದೇಸಾಯಿ
ಪ್ರವಾಸಕ್ಕೆ ಬಂದಿದ್ದ ಭೋಪಾಲ್ ಮೂಲದ ಅರ್ಪಿತ್ ಶುಕ್ಲಾ ಮುಳುಗಿ ಸಾವನ್ನಪ್ಪಿದ್ದರು. ನೀರಲ್ಲಿ ಮುಳುಗಿ ನಾಪತ್ತೆಯಾದ ಬಳಿಕ ಶವಕ್ಕಾಗಿ ಹಲವು ದಿನಗಳಿಂದ ಪೊಲೀಸರು ಹಾಗೂ ರಕ್ಷಣಾ ತಂಡ ಶೋಧ ಕಾರ್ಯ ನಡೆಸುತ್ತಿತ್ತು. ಕೊನೆಗೂ 17 ದಿನಗಳ ಬಳಿಕ ನದಿಯಲ್ಲಿ ಮುಳುಗಿದ್ದ ಈ ಪ್ರವಾಸಿಗನ ಶವವನ್ನು ಪತ್ತೆ ಹಚ್ಚುವಲ್ಲಿ ಕುಳೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರ್ಪಿತ್ ಶುಕ್ಲಾ ಸೆಪ್ಟೆಂಬರ್ 5 ರಂದು ದೂದ್ ಸಾಗರ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸೆ.22ರಂದು ಶವ ಪತ್ತೆಯಾಗಿತ್ತು. ಸಪ್ಟೆಂಬರ್ 24 ರಂದು ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬ ಸದಸ್ಯರು ಶವವನ್ನು ವಿಮಾನದ ಮೂಲಕ ಭೋಪಾಲ್‍ಗೆ ಕೊಂಡೊಯ್ದಿದ್ದಾರೆ ಎಂದು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅಜಯ್ ಧುರಿ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಕುಳೆ ಪೊಲೀಸರು ಮೃತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಮೃತದೇಹದೊಂದಿಗೆ ಕುಟುಂಬಸ್ಥರು ಭೋಪಾಲ್‍ಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಮೃತದೇಹವನ್ನು ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.