ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್: ಸಂತ್ರಸ್ತೆ
Team Udayavani, Jan 18, 2022, 5:10 PM IST
ಪಣಜಿ: ಗೋವಾದಲ್ಲಿ ಒಂದೆಡೆ ಚುನಾವಣೆಯ ಕಾವೇರಿದ್ದು ಇನ್ನೊಂದೆಡೆ ಬಿಜೆಪಿ ಮಾಜಿ ಸಚಿವರೋರ್ವರ ಲೈಂಗಿಕ ಹಗರಣ ಭಾರೀ ಸದ್ದು ಮಾಡುತ್ತಿದೆ.
ಈ ಪ್ರಕರಣದ ವೀಡಿಯೊ ಮಾಡಲು 10 ಲಕ್ಷ ರೂ ಡೀಲ್‍ನಲ್ಲಿ 2 ಲಕ್ಷ ರೂ ಅಡ್ವಾನ್ಸ್ ಮುಂಗಡವಾಗಿ ಕಾಂಗ್ರೆಸ್ ಮುಖಂಡರು ನೀಡಿದ್ದು ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾಳೆ. ಇದೀಗ ಬಿಹಾರದ ಮುಫಸಿಲ್ ಪೊಲೀಸ್ ಠಾಣೆಯಲ್ಲಿ ವೀಡಿಯೊ ಮಾಡಿದ್ದ 4 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಸಂತ್ರಸ್ತೆಯು ಪೊಲೀಸರಿಗೆ ನೀಡಿರುವ ಹೇಳಿಕೆಯಂತೆ, 2007 ರಿಂದ ನನ್ನ ಪತಿಯೊಂದಿಗೆ ನಾನು ಗೋವಾದಲ್ಲಿ ವಾಸಿಸುತ್ತಿದ್ದೆ. ನನ್ನ ಪತಿ ಮೇ 2018 ರಲ್ಲಿ ಆಕಸ್ಮಿಕವಾಗಿ ನಿಧನರಾದರು. ಪತಿಯ ಸಾವಿಗೆ ಪರಿಹಾರ ಪಡೆಯಲು ಸಚಿವರು ಸಹಕರಿಸಿದ್ದರು. ಇದೇ ವೇಳೆ ಅಸಹಾಯಕತೆಯ ಲಾಭ ಪಡೆದು ಯಶವಂತ್ ಘೋನ್ಸೇಕರ್, ಸಾನು ಅಲಿಯಾಸ್ ಪ್ರಜ್ಯೋತ್, ದಾಮೋದರ್ ದಿವ್ಕರ್, ಕಾಂಗ್ರೆಸ್ ಮುಖಂಡ ಸಂಕಲ್ಪ ಅಮೋಣಕರ್ ಸೇರಿದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳು ವೀಡಿಯೊ ಮಾಡಿದ್ದಾರೆ. ಇದಾದ ಬಳಿಕ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿತ್ತು.
ಸಂತ್ರಸ್ತೆಯು ತನ್ನ ವೀಡಿಯೊ ಮತ್ತು ಆಡಿಯೋ ಎಡಿಟ್ ಮಾಡಿ ಅಂತರ್ಜಾಲದಲ್ಲಿ ವೈರಲ್ ಮಾಡಿದವರ ವಿರುದ್ಧ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಈ ಪ್ರಕರಣವು ಇದೀಗ ಗೋವಾದ ಮಾಜಿ ಬಿಜೆಪಿ ಶಾಸಕ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಬಿಹಾರದಿಂದ ದಕ್ಷಿಣ ಗೋವಾ ಮಡಗಾಂವ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಗೋವಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.