
ನಾವು ಜನರ ಧ್ವನಿ ಎತ್ತಿದಾಗ ಹೆದರಿ ಮಹಾದಾಯಿ ಡಿಪಿಆರ್ ಗೆ ಅನುಮತಿ: ಡಿ.ಕೆ.ಶಿವಕುಮಾರ್
ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್....ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ....
Team Udayavani, Jan 2, 2023, 2:43 PM IST

ಹುಬ್ಬಳ್ಳಿ: ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ ಇದ್ದಹಾಗೆ. ರಾಜ್ಯ, ಗೋವಾ, ಕೇಂದ್ರದಲ್ಲಿ ತನ್ನದೆಯಾದ ಬಿಜೆಪಿ ಸರಕಾರ ಇದ್ದರೂ ಮೂರು ವರ್ಷದಿಂದ ಮಹಾದಾಯಿ ಯೋಜನೆ ಜಾರಿಗೊಳಿಸಲು ಆಗಿಲ್ಲ. ಈಗ ನಾವು ಜನರ ಧ್ವನಿ ಎತ್ತಿದಾಗ ಹೆದರಿ ಡಿಪಿಆರ್ ಗೆ ಅನುಮತಿ ಪಡೆದುಕೊಂಡು ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಈಗ ಬಿಜೆಪಿಯವರು ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು ಕಾಮಗಾರಿ ಆರಂಭಿಸಿ ಎಂದು ಪತ್ರ ಸಿದ್ಧಪಡಿಸಿದ್ದಾರೆ. ಗೋವಾ ಮಂತ್ರಿಯೊಬ್ಬ ರಾಜೀನಾಮೆ ಕೊಡುತ್ತಾರಂತೆ ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ. ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್. ಮಹಾದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಮೂಲಭೂತ ಕಾಮಗಾರಿಯನ್ನಾದರೂ ಪೂರ್ಣಗೊಳಿಸಬಹುದಿತ್ತು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಷ್ಟೊಂದು ಅಪ್ ಡೇಟೆಡ್ ಇದ್ದಾರೆ ಅನ್ನೊದು, ಪತ್ರ ಓದಲಿ ಗೊತ್ತಾಗುತ್ತೆ.ಕೇಂದ್ರ ಸರಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಾವು ಅದನ್ನು ಸರಿಯಾಗಿ ನೋಡಿಕೊಂಡಿದ್ದೇವೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ? ನಮಗೆ ಅಧಿಕಾರ ಕೊಡ್ರಿ ಆರು ತಿಂಗಳಲ್ಲಿ ಆ ಯೋಜನೆಯನ್ನು ಬಡಿದು ಹಾಕುತ್ತೇವೆ ಎಂದರು.
ಮೂಗಿಗೆ ಅಲ್ಲ ತಲೆಗೆ ತುಪ್ಪ ಸವರಿದ್ದಾರೆ
ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ವಿಚಾರವಾಗಿ ಸರಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಠ ವಾಸನೆಯಾದರು ನೋಡಬಹುದಿತ್ತು. ಬಸವರಾಜ ಬೊಮ್ಮಾಯಿ ಸರಕಾರ ತಲೆಗೆ ಸವರಿದೆ. ಅದನ್ನು ಹೇಗೆ ತಿನ್ನೋದು. ಜಯಮೃತ್ಯುಂಜಯ ಸ್ವಾಮೀಜಿ ಸರಿಯಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ನೀಡಿದ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ಇದನ್ನು ಹೇಗೆ ಒಪ್ಪುತ್ತೆ. ಸಂಪುಟದ ತೀರ್ಮಾನ ಅದೇಶದ ಬಳಿಕ ಯಾರಾದರೂ ಕೋರ್ಟ್ ಗೆ ಹೋದರೆ ಮುಗಿತು. ಮೀಸಲಾತಿ ಜಾರಿ ಆಗುವುದಿಲ್ಲ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದರು, ಮುಂದೆ ಜಾರಿ ಆಗಿಲ್ಲ. ಕೇಂದ್ರಕ್ಕೆ ಕಳುಹಿಸಿ ಸಂಸತ್ತಿನಲ್ಲಿ ಮಂಡಿಸಬೇಕಿತ್ತು. ಆದರೆ ಕೇಂದ್ರಕ್ಕೆ ಕಳಿಸಲೇ ಇಲ್ಲ. ಇನ್ನು 90 ದಿನದಲ್ಲಿ ಸರಕಾರವೇ ಇರಲ್ಲ. ಇವರ ಕೈಯಲ್ಲಿ ಅಧಿಕಾರನೇ ಇರುವುದಿಲ್ಲ. ಇನ್ನೂ ಮೀಸಲಾತಿ ಹೇಗೆ ಜಾರಿ ಮಾಡುತ್ತಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ ಎಂದು ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ಮಾಡಿದರು. ಪಂಚಮಸಾಲಿ ನಾಯಕರು ಅನ್ನೋರು ಎಲ್ಲಿ ಹೋದರು. ಸರಕಾರದ ಬಗ್ಗೆ ಏಕೆ ಮೌನವಾಗಿದ್ದಾರೆ? ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಏಕೆ ಮಾತನಾಡುತ್ತಿಲ್ಲ? ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ವರಿಗೆ ಸಮಪಾಲು, ಸಮ ಬಾಳು ನೀಡಲಾಗುವುದು ಎಂದರು.
ಕಾಂಗ್ರೆಸ್ ನಲ್ಲಿ ನೋ ಫಿಕ್ಸಿಂಗ್
ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡಲ್ಲ. ಕಾಂಗ್ರೆಸ್ ನ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಯಾವುದೇ ಕಿತ್ತಾಟ ನಡೆದಿಲ್ಲ. ಶೇಕಡಾ 95ರಷ್ಟು ಜನರಿಗೆ ಟಿಕೆಟ್ ಸಿಗುವುದು ಖಚಿತ. ಮಾಜಿ ಸಚಿವ ಸಂತೋಷ ಲಾಡ್ ನಮ್ಮ ನ್ಯಾಷನಲ್ ಲೀಡರ್. ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ. ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದರು.
ಉದ್ಯಮಿ ಪ್ರದೀಪ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್ ಐಆರ್ ದಾಖಲಾಗಿರುವುದು ಗೊತ್ತಾಗಿದೆ. ಬಿಜೆಪಿಯವರು ಅದೆಲ್ಲವನ್ನು ನೋಡಿಕೊಳ್ಳುತ್ತಾರೆ. ಶೀಘ್ರದಲ್ಲಿ ಬಿ ರಿಪೋರ್ಟ್ ಸಹ ದಾಖಲಾಗಬಹುದು ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
