ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್
ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ರೈತ ಸಂಘಟನೆಯ ಮುಖಂಡರುಗಳ ಹೆಸರು
Team Udayavani, Jan 27, 2021, 3:31 PM IST
ನವದೆಹಲಿ: ಗಣರಾಜ್ಯೋತ್ಸವ (ಜನವರಿ 26) ದಿನಾಚರಣೆಯಂದು ರೈತರ ಟ್ರ್ಯಾಕ್ಟರ್ ರಾಲಿ ಹಿಂಸಾರೂಪ ಪಡೆದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ರೈತ ಸಂಘಟನೆಯ ಮುಖಂಡರುಗಳ ಹೆಸರುಗಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದಲ್ಲಿ ಅನ್ಯ ಶಕ್ತಿಗಳ ಕೈವಾಡ : HDK
ದೆಹಲಿ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್, ರೈತ ಸಂಘಟನೆಯ ಮುಖಂಡರಾದ ದರ್ಶನ್ ಪಾಲ್, ರಾಜಿಂದರ್ ಸಿಂಗ್, ಬಲ್ಬೀರ್ ಸಿಂಗ್ ರಾಜೇವಾಲ್, ಬೂಟಾ ಸಿಂಗ್ ಬುರ್ಜ್ ಗಿಲ್. ಜೋಗಿಂದರ್ ಸಿಂಗ್ ಹಾಗೂ ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಖಾಯತ್ ಹೆಸರು ನಮೂದಿಸಿರುವುದಾಗಿ ವರದಿ ತಿಳಿಸಿದೆ.
ಮಂಗಳವಾರ(ಜ.26) ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 395 (ದರೋಡೆ), 397 (ಸುಲಿಗೆ, ಸಾವಿಗೆ ಕಾರಣವಾಗುವ ದಾಳಿ), 120 ಬಿ (ಕ್ರಿಮಿನಲ್ ಸಂಚು) ಅನ್ವಯ ಎಫ್ ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.
ಘಟನೆ ಬಗ್ಗೆ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸಲಿದೆ ಎಂದು ತಿಳಿಸಿರುವ ದೆಹಲಿ ಪೊಲೀಸರು, ಕೆಂಪುಕೋಟೆಯಲ್ಲಿ ನಡೆಸಿದ ಕೃತ್ಯ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು.
ಹಿಂಸಾಚಾರದ ವೇಳೆ ಐಟಿಒ ಪ್ರದೇಶದಲ್ಲಿ ಹೆಚ್ಚುವರಿ ಡಿಸಿಪಿ ಮೇಲೆ ತಲ್ವಾರ್ ನಲ್ಲಿ ಹಲ್ಲೆ ನಡೆಸಲಾಗಿತ್ತು. ರೈತರ ಹಿಂಸಾಚಾರ ಘಟನೆಯಲ್ಲಿ 300ಕ್ಕೂ ಅಧಿಕ ಪೊಲೀಸರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.