ವಿಶಾಖಪಟ್ಟಣದಲ್ಲಿ ಆಸೀಸ್ ಮೆರೆದಾಟ; ಮಾರ್ಶ್- ಸ್ಟಾರ್ಕ್ ಅಬ್ಬರಕ್ಕೆ ಮಂಕಾದ ರೋಹಿತ್ ಪಡೆ
Team Udayavani, Mar 19, 2023, 5:40 PM IST
ವಿಶಾಖಪಟ್ಟಣ: ಏಕದಿನ ಸರಣಿಯ ಮೊದಲ ಪಂದ್ಯ ಗೆದ್ದು ಬೀಗಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. ವಿಶಾಖಪಟ್ಟಣದಲ್ಲಿ ಸ್ಟಾರ್ಕ್ ಘಾತಕ ದಾಳಿ, ಮಾರ್ಶ್- ಹೆಡ್ ಬ್ಯಾಟಿಂಗ್ ಅಬ್ಬರಕ್ಕೆ ನಲುಗಿದ ರೋಹಿತ್ ಪಡೆ ಅವಮಾನಕರ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 26 ಓವರ್ ಗಳಲ್ಲಿ 117 ರನ್ ಗಳಿಗೆ ಆಲೌಟಾದರೆ, ಆಸ್ಟ್ರೇಲಿಯಾ ತಂಡವು ಕೇವಲ 11 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.
ಸ್ಟಾರ್ಕ್ ದಾಳಿ: ವಿಶಾಖಪಟ್ಟದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿದ ಬೌಲರ್ ಗಳು ಆರಂಭದಿಂದಲೇ ವಿಕೆಟ್ ಪಡೆಯಲಾರಂಭಿಸಿದರು.
ಮೊದಲ ಓವರ್ ನಲ್ಲೇ ಗಿಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಕೂಡಾ 13 ರನ್ ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಮತ್ತೊಂದು ಗೋಲ್ಡಕ್ ಡಕ್ ಗೆ ಔಟಾದರು. ರಾಹುಲ್ 9 ರನ್ ಮತ್ತು ಪಾಂಡ್ಯ 1 ರನ್ ಗೆ ಔಟಾದರು.
ಅಲ್ಪ ಪ್ರತಿರೋಧ ತೋರಿದ ವಿರಾಟ್ ಕೊಹ್ಲಿ 31 ರನ್ ಮಾಡಿದರೆ, ಅಕ್ಷರ್ ಪಟೇಲ್ ಅಜೇಯ 29 ರನ್ ಗಳಿಸಿದರು. ರವೀಂದ್ರ ಜಡೇಜಾ 16 ರನ್ ಮಾಡಿದರು.
ಆಸೀಸ್ ಪರ ಘಾತಕ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಐದು ವಿಕೆಟ್ ಪಡೆದರು. ಸೀನ್ ಅಬೋಟ್ ಮೂರು ಮತ್ತು ನಥನ್ ಎಲ್ಲಿಸ್ ಎರಡು ವಿಕೆಟ್ ಪಡೆದರು.
ಮಾರ್ಶ್- ಹೆಡ್ ಹೊಡೆತ: ಸುಲಭ ಗುರಿ ಬೆನ್ನತ್ತಿದ ಆಸೀಸ್ ಆರಂಭಿಕರಾದ ಮಿಚೆಲ್ ಮಾರ್ಶ್ ಮತ್ತು ಟ್ರಾವಿಸ್ ಹೆಡ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಮಳೆ ಬರುವ ಭೀತಿಯಿದ್ದ ಕಾರಣ ವೇಗವಾಗಿ ಬ್ಯಾಟಿಂಗ್ ಮಾಡಿದ ಆಸೀಸ್ ಆಟಗಾರರು ಕೇವಲ 11 ಓವರ್ ಗಳಲ್ಲಿ ಪಂದ್ಯ ಮುಗಿಸಿದರು. ಮೊದಲ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮಾರ್ಶ್ ಇಂದು ಕೇವಲ 36 ಎಸೆತಗಳಲ್ಲಿ 66 ರನ್ ಮಾಡಿದರು. ಹೆಡ್ 30 ಎಸೆತಗಳಲ್ಲಿ 51 ರನ್ ಚಚ್ಚಿದರು.
ಸರಣಿಯು 1-1 ಅಂತರದ ಸಮಬಲ ಹೊಂದಿದ್ದು, ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿದೆ.