
ಟಿ20 ತಂಡದ ಭವಿಷ್ಯವೇನು? ರೋಹಿತ್, ಕೊಹ್ಲಿ, ದ್ರಾವಿಡ್ ಜತೆ ಬಿಸಿಸಿಐ ಚರ್ಚೆ
Team Udayavani, Nov 13, 2022, 4:35 PM IST

ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲೇ ಹೊರಬಿದ್ದಿದೆ. ಅಲ್ಲಿಗೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಪ್ರಶ್ನೆಗಳೆದ್ದಿವೆ. ಹಾರ್ದಿಕ್ ಪಾಂಡ್ಯ ನಾಯಕರಾಗುತ್ತಾರೆ ಎಂಬ ವಿಚಾರಗಳು ಇವೆ. ಇಷ್ಟರ ಮಧ್ಯೆ ತಂಡದ ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿ, ತರಬೇತುದಾರ ರಾಹುಲ್ ದ್ರಾವಿಡ್ ಸಲಹೆಗಳನ್ನು ಕೇಳಿ ಮುಂದಿನ ನಿರ್ಧಾರ ಮಾಡುವುದಾಗಿ ಬಿಸಿಸಿಐ ಮೂಲಗಳು ಹೇಳಿವೆ.
ನಾವು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳಲು ಬಯಸುವುದಿಲ್ಲ. ತಂಡದ ಆಡಳಿತ ಹಾಗೂ ಆಟಗಾರರು ತಮ್ಮ ಅಭಿಪ್ರಾಯವನ್ನು ಮೊದಲು ಹಂಚಿಕೊಳ್ಳಲಿ. ಅನಂತರ ಬಿಸಿಸಿಐ ಮುಂದಿನ ನಿರ್ಧಾರ ಮಾಡಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆಂದು “ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಪ್ರತಿಕ್ರಿಯಿಸಿದ್ದ ರಾಹುಲ್ ದ್ರಾವಿಡ್, ತಂಡದಲ್ಲಿ ಅದ್ಭುತ ಆಟಗಾರರಿದ್ದಾರೆ. ಅವರ ಭವಿಷ್ಯದ ಬಗ್ಗೆ ಈಗಲೇ ಹೇಳುವುದು ಉತ್ತಮವಲ್ಲ. ಅದಕ್ಕೆ ಇನ್ನೂ ಎರಡು ವರ್ಷ ಸಮಯವಿದೆ ಎಂದಿದ್ದಾರೆ. ಮುಂದಿನ ನ್ಯೂಜಿಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿರಲಿದ್ದಾರೆ. ಅವರನ್ನೇ ಟಿ20ಗೆ ಮುಂದಿನ ನಾಯಕರನ್ನಾಗಿಸಲು ಚಿಂತನೆಗಳಿವೆ. ಬಹುಶಃ ರೋಹಿತ್ ಶರ್ಮ ಈ ಪಟ್ಟ ಕಳೆದುಕೊಳ್ಳಬಹುದು. ಹಾಗೆಯೇ ಕೆ.ಎಲ್.ರಾಹುಲ್ ತಂಡದಲ್ಲಿ ಸ್ಥಾನವನ್ನೇ ಕಳೆದುಕೊಳ್ಳಬಹುದು.
ಟಾಪ್ ನ್ಯೂಸ್
