ಇಂದಿನಿಂದ ಡೆನ್ಮಾರ್ಕ್ ಬ್ಯಾಡ್ಮಿಂಟನ್: ಸಿಂಧು, ಸೈನಾ ಆಕರ್ಷಣೆ
Team Udayavani, Oct 17, 2017, 6:05 AM IST
ಒಡೆನ್ಸೆ(ಡೆನ್ಮಾರ್ಕ್): ಅ.17 ರಿಂದ ಡೆನ್ಮಾರ್ಕ್ನ ಒಡೆನ್ಸೆಯಲ್ಲಿ ಡೆನ್ಮಾರ್ಕ್ ಸೂಪರ್ ಸೀರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಕೂಟ ಆರಂಭವಾಗಲಿದೆ. ಭಾರತೀಯ ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕೆ.ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಭರವಸೆಯ ತಾರೆಯರಾಗಿದ್ದಾರೆ.
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಇತ್ತೀಚಿನ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊರಿಯಾ ಓಪನ್ನಲ್ಲಿ ಚಾಂಪಿಯನ್ ಆಗುವ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತದ ಆಟಗಾರ್ತಿ ಎಂಬ ಖ್ಯಾತಿಗಳಿಸಿದ್ದಾರೆ. ಸಿಂಧು ಭರ್ಜರಿ ಫಾರ್ಮ್ನಲ್ಲಿರುವುದರಿಂದ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಅದೇ ರೀತಿ ಕೆ.ಶ್ರೀಕಾಂತ್ ಇದೇ ವರ್ಷ ಸತತ 3 ಸೂಪರ್ ಸೀರೀಸ್ನಲ್ಲಿ ಫೈನಲ್ ತಲುಪಿ ಅದರಲ್ಲಿ 2ರಲ್ಲಿ ಚಾಂಪಿಯನ್ಶಿಪ್ ಪಡೆದಿದ್ದಾರೆ. ಇದರಿಂದ ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಸೈನಾ ನೆಹ್ವಾಲ್ ಇತ್ತೀಚೆಗೆ ನಡೆದ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ವಿಶ್ವಾಸದಲ್ಲಿದ್ದಾರೆ. ಉಳಿದಂತೆ ಭಾರತದದಿಂದ ಬಿ.ಸಾಯಿ ಪ್ರಣೀತ್. ಎಚ್.ಎಸ್.ಪ್ರಣಯ್ ಪ್ರಮುಖರಾಗಿದ್ದಾರೆ.