ಮೆಲ್ಬರ್ನ್ ಟೆಸ್ಟ್: ಎಲ್ಲ 11 ಆಟಗಾರರಿಗೂ ವಿದೇಶದಲ್ಲಿ ಮೊದಲ ಚೇಸಿಂಗ್ ಜಯದ ಅನುಭವ!
Team Udayavani, Dec 30, 2020, 12:40 PM IST
ಮೆಲ್ಬರ್ನ್: ಆಸೀಸ್ ವಿರುದ್ಧದ ಎರಡನೇ ಪಂದ್ಯವನ್ನು ಭಾರತ ಯಶಸ್ವಿ ಚೇಸಿಂಗ್ ಮೂಲಕ ಜಯಿಸಿತಷ್ಟೇ? ಈ ಸಂದರ್ಭದಲ್ಲಿ ಸ್ವಾರಸ್ಯವೊಂದು ಕಂಡುಬಂದಿದೆ. ಇದು ಈ ತಂಡದ ಎಲ್ಲ 11 ಮಂದಿ ಆಟಗಾರರೂ ವಿದೇಶದಲ್ಲಿ ಮೊದಲ ಬಾರಿ ಅನುಭವಿಸಿದ ಚೇಸಿಂಗ್ ಗೆಲುವಿನ ಸಂಭ್ರಮವಾಗಿದೆ!
ಭಾರತ ಕೊನೆಯ ಸಲ ವಿದೇಶದಲ್ಲಿ ಚೇಸಿಂಗ್ ಮೂಲಕ ಜಯ ಸಾಧಿಸಿದ್ದು ಸರಿಯಾಗಿ 10 ವರ್ಷಗಳ ಹಿಂದೆ. ಅಂದು ಶ್ರೀಲಂಕಾ ಎದುರಿನ ಕೊಲಂಬೊ ಪಂದ್ಯದಲ್ಲಿ ಈ ಸಾಧನೆಗೈದಿತ್ತು. ಸ್ವಾರಸ್ಯವೆಂದರೆ, ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿಗೂ ವಿದೇಶದಲ್ಲಿ ಈ ವರೆಗೆ ಚೇಸಿಂಗ್ ಗೆಲುವು ಒಲಿದಿಲ್ಲ.
ಭಾರತ 17 ವರ್ಷಗಳ ಬಳಿಕ ಆಸ್ಟ್ರೇಲಿಯದಲ್ಲಿ ಯಶಸ್ವಿ ಚೇಸಿಂಗ್ ಮಾಡಿತು. ಕೊನೆಯ ಗೆಲುವು 2003ರಲ್ಲಿ ಅಡಿಲೇಡ್ನಲ್ಲಿ ಒಲಿದಿತ್ತು. ಮೆಲ್ಬರ್ನ್ ನಲ್ಲಿ ಕೊನೆಯ ಸಲ ಪ್ರವಾಸಿ ತಂಡವೊಂದು ರನ್ ಬೆನ್ನಟ್ಟಿ ವಿಜಯ ಸಾಧಿಸಿದ್ದು 2008ರಲ್ಲಿ. ಅಂದಿನ ತಂಡ ದಕ್ಷಿಣ ಆಫ್ರಿಕಾ.