ಮದುವೆ ಕಾರಣದಿಂದ ಐಪಿಎಲ್ ನ ಮೊದಲ ಕೆಲವು ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಅಲಭ್ಯ
Team Udayavani, Feb 16, 2022, 2:45 PM IST
ಸಿಡ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಈ ಬಾರಿಯ ಐಪಿಎಲ್ ಕೂಟದ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಅವರ ವಿವಾಹ ನಿಶ್ಚಯವಾಗಿದೆ. ವಿವಾಹ ಸಮಾರಂಭದ ಕಾರಣದಿಂದ ಮ್ಯಾಕ್ಸ್ ವೆಲ್ ಅವರು ಪಾಕಿಸ್ಥಾನ ಪ್ರವಾಸ ಮತ್ತು ಐಪಿಎಲ್ ನ ಮೊದಲ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಪಾಕಿಸ್ಥಾನ ಸರಣಿಗೆ ತನ್ನ ಅಲಭ್ಯತೆಯ ಕುರಿತು ಮ್ಯಾಕ್ಸ್ ವೆಲ್ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಗೆ ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಸಲಹೆಯ ಹೊರತಾಗಿಯೂ ನಿರಂತರ ವೇಳಾಪಟ್ಟಿ ಬದಲಾವಣೆಗಳಿಂದಾಗಿ ಡೇಟ್ ಕ್ಲ್ಯಾಶ್ ಆಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿಕೊಂಡಿದ್ದಾರೆ.
ಗ್ಲೆನ್ ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ. ಮಾರ್ಚ್ 27ರಂದು ಗ್ಲೆನ್- ವಿನಿ ವಿವಾಹ ಸಮಾರಂಭ ನಡೆಯಲಿದೆ.
ಇದನ್ನೂ ಓದಿ:ಯುವಕ, ಯುವತಿಯರ ಫೋಟೋ ಸಂಗ್ರಹಿಸಿ ಅಶ್ಲೀಲ ಪೋಸ್ಟರ್ ಎಡಿಟ್ : ಕಿಡಿಗೇಡಿಗಳ ಸೆರೆ
ಆಸ್ಟ್ರೇಲಿಯ ತಂಡವು ಪಾಕಿಸ್ತಾನದಲ್ಲಿ ಮೂರು ಟೆಸ್ಟ್ಗಳು, ಮೂರು ಏಕದಿನ ಪಂದ್ಯಗಳು ಮತ್ತು ಒಂದು ಟಿ20 ಪಂದ್ಯವನ್ನು ಆಡಲಿದೆ. ಮೊದಲ ಟೆಸ್ಟ್ ಮಾರ್ಚ್ 4 ರಿಂದ ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಪ್ರವಾಸದ ಕೊನೆಯ ಪಂದ್ಯ ಏಪ್ರಿಲ್ 5 ರಂದು ನಡೆಯಲಿದೆ.
ಹೀಗಾಗಿ ಆಸ್ಟ್ರೇಲಿಯಾದ ಕೆಲವು ಆಟಗಾರರು ಮೊದಲ ವಾರದ ಐಪಿಎಲ್ ಗೆ ಅಲಭ್ಯರಾಗಲಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೋಯಿನಸ್, ಜೋಶ್ ಹ್ಯಾಜಲ್ ವುಡ್, ಮ್ಯಾಥ್ಯೂ ವೇಡ್ ಮತ್ತು ಡೇನಿಯಲ್ ಸ್ಯಾಮ್ಸ್ ಆರಂಭಿಕ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.