ಮತ್ತೆ ಗಾಯದ ನಡುವೆ ಒಂದೇ ಕೈಯಲ್ಲಿ ಆಡಿ ಹೃದಯ ಗೆದ್ದ ಹನುಮ ವಿಹಾರಿ
Team Udayavani, Feb 3, 2023, 1:31 PM IST
ಇಂದೋರ್: ಮಧ್ಯಪ್ರದೇಶ-ಆಂಧ್ರ ವಿರುದ್ಧ ಇಂದೋರ್‌ನಲ್ಲಿ ಇನ್ನೊಂದು ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದೆ. ಇದು ಅತ್ಯಂತ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಆಂಧ್ರ ತಂಡದ ನಾಯಕ ಹನುಮ ವಿಹಾರಿ ಮೊದಲ ಇನಿಂಗ್ಸ್ ನಲ್ಲೇ ಗಾಯಗೊಂಡು 16 ರನ್ ಗಳಾಗಿದ್ದಾಗ ಹೊರ ನಡೆದಿದ್ದರು. ಅವರ ಎಡಗೈ ಮಣಿಕಟ್ಟಿಗೆ ಬೌನ್ಸರ್ ಏಟು ಬಿದ್ದು, ಮೂಳೆ ಬಿರುಕುಬಿಟ್ಟಿತ್ತು. ಆದರೂ ಬಹಳ ಹೊತ್ತಿನ ನಂತರ ಕ್ರೀಸ್‌ಗೆ ಮರಳಿದ್ದ ಅವರು ಎಡಗೈನಲ್ಲಿ ಬ್ಯಾಟ್ ಮಾಡಿ ಒಟ್ಟು 27 ರನ್ ಗಳಿಸಿದ್ದರು. ತಂಡ 379 ರನ್ ಗಳಿಸಿತ್ತು.
ಇಂತಹ ನೋವಿನ ಸ್ಥಿತಿಯಲ್ಲೂ ಆಂಧ್ರಪ್ರದೇಶದ 2ನೇ ಇನಿಂಗ್ಸ್‌ನಲ್ಲಿ 11ನೇ ಬ್ಯಾಟರ್ ಆಗಿ ಕಣಕ್ಕಿಳಿದರು. ಮತ್ತೆ ಎಡಗೈನಲ್ಲಿ ಆಡಿ 3 ಬೌಂಡರಿ ಬಾರಿಸಿದರು. ವಿಶೇಷವೆಂದರೆ ಈ ಬಾರಿ ಅವರು ಒಂದೇ ಕೈನಲ್ಲಿ ಆಡಿದ್ದು. ಒಂದೇ ಕೈನಲ್ಲಿ ರಿವರ್ಸ್ ಸ್ವೀಪ್ ಮಾಡಿ ಅದ್ಭುತವಾಗಿ ಬೌಂಡರಿ ಬಾರಿಸಿದರು. ತಂಡ ಒಟ್ಟು 93 ರನ್‌ಗಳಿಗೆ ಆಲೌಟಾದರೂ, ವಿಹಾರಿ 16 ಎಸೆತಗಳಲ್ಲಿ 15 ರನ್ ಬಾರಿಸಿದರು. ಇದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಟ್ರೇಲರ್ ನಲ್ಲಿ ಸದ್ದು ಮಾಡುತ್ತಿದೆ ‘ಹೊಂದಿಸಿ ಬರೆಯಿರಿ’
ಅವರ ಅಮೋಘ ಹೋರಾಟಕಾರಿ ಆಟ ಭಾರೀ ಸುದ್ದಿ ಮಾಡಿದೆ. ಅವರ ಇಂತಹ ಆಟ ಇದೇ ಮೊದಲಲ್ಲ. 2021ರಲ್ಲಿ ಆಸೀಸ್ ವಿರುದ್ಧ ಸಿಡ್ನಿಯಲ್ಲಿ ವಿಹಾರಿ ತೀರಾ ಮಂಡಿನೋವಿನಲ್ಲಿದ್ದರು. ಆಗ ಭಾರತಕ್ಕೆ 407 ರನ್‌ಗಳ ದೊಡ್ಡ ಗುರಿಯಿತ್ತು. ಅಂತಹ ಹೊತ್ತಿನಲ್ಲೂ ಪಂದ್ಯವನ್ನುಳಿಸಿಕೊಳ್ಳಲು 6ನೇ ವಿಕೆಟ್‌ಗೆ ಅಶ್ವಿನ್ ಜೊತೆಗೂಡಿ 62 ರನ್ ಸೇರಿಸಿದರು. ಈ ಹೊತ್ತಿನಲ್ಲಿ 161 ಎಸೆತ ಎದುರಿಸಿದ್ದ ಅವರು 23 ರನ್ ಗಳಿಸಿ ಅಜೇಯರಾಗಿದ್ದರು. ಇದರಿಂದ ಪಂದ್ಯ ಡ್ರಾ ಆಯಿತು. ಭಾರತ ಸೋಲು ತಪ್ಪಿಸಿಕೊಂಡಿತು.