ಟೆಸ್ಟ್‌ನಲ್ಲೂ ನಂ.1 ಸ್ಥಾನದ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ
Team Udayavani, Jan 25, 2023, 5:04 PM IST
ಇಂದೋರ್: ಟೀಮ್ ಇಂಡಿಯಾ ಬೆನ್ನು ಬೆನ್ನಿಗೆ ಎರಡು ತವರಿನ ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಆಗಿ ಗೆದ್ದು ವಿಶ್ವ ನಂಬರ್ ವನ್ ತಂಡವಾಗಿ ಮೂಡಿಬಂದಿದೆ.
ಮೊದಲು ಶ್ರೀಲಂಕಾವನ್ನು, ಬಳಿಕ ನ್ಯೂಜಿಲ್ಯಾಂಡನ್ನು ವೈಟ್‌ವಾಶ್ ಮಾಡಿ ಈ ಎತ್ತರ ತಲುಪಿದೆ. ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ ಅಗ್ರ ತಂಡವಾಗಿರುವ ಭಾರತದ ಮುಂದಿನ ಗುರಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ವನ್ ಆಗುವುದು ಎಂಬುದಾಗಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಆದರೆ ಈ ಗುರಿ ಅಷ್ಟು ಸುಲಭದ್ದಲ್ಲ ಎಂಬುದು ಅರಿವಿದೆ. ಮುಂದಿರುವುದು ಪ್ರಬಲ ಆಸ್ಟ್ರೇಲಿಯದ ಸವಾಲು. ಇದು ಭಾರತದ ಪಾಲಿಗೆ ತವರಿನ ಸರಣಿಯಾದರೂ ಆಸೀಸ್ ಪ್ರಬಲ ಹೋರಾಟ ಸಂಘಟಿಸುವುದರಲ್ಲಿ ಅನುಮಾನವಿಲ್ಲ.
“ಆಸ್ಟ್ರೇಲಿಯ ಒಂದು ಕ್ವಾಲಿಟಿ ತಂಡ. ಖಂಡಿತವಾಗಿಯೂ ನಮ್ಮ ಮುಂದೆ ಕಠಿನ ಸವಾಲಿದೆ. ಆದರೆ ಇದನ್ನು ನಿಭಾಯಿಸಬಲ್ಲೆವು ಎಂಬ ವಿಶ್ವಾಸವೂ ಇದೆ’ ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.
4 ಪಂದ್ಯಗಳ “ಬೋರ್ಡರ್-ಗಾವಸ್ಕರ್ ಟ್ರೋಫಿ’ ಟೆಸ್ಟ್ ಸರಣಿ ಮುಂದಿನ ತಿಂಗಳು ಆರಂಭವಾಗಲಿದೆ. ಇದು ಬೋರ್ಡರ್-ಗಾವಸ್ಕರ್ ಟ್ರೋಫಿ ಸಾಂಪ್ರದಾಯಿಕ ಮುಖಾಮುಖಿಯ 4 ಪಂದ್ಯಗಳ ಕೊನೆಯ ಸರಣಿ ಎಂಬುದಾಗಿ ಬಿಸಿಸಿಐ ಈಗಾಗಲೇ ತಿಳಿಸಿದೆ.
ಹೀಗಾಗಿ ಎರಡೂ ತಂಡಗಳ ಪಾಲಿಗೆ ಇದೊಂದು ಪ್ರತಿಷ್ಠೆಯ ಕದನವಾಗುವುದರಲ್ಲಿ ಅನುಮಾನವಿಲ್ಲ.
ಆಸ್ಟ್ರೇಲಿಯ ನಂ.1
ಸದ್ಯ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 126 ರೇಟಿಂಗ್ ಅಂಕ ಹೊಂದಿರುವ ಆಸ್ಟ್ರೇಲಿಯ ಅಗ್ರಸ್ಥಾನದಲ್ಲಿದೆ. 115 ಅಂಕ ಹೊಂದಿರುವ ಭಾರತ ದ್ವಿತೀಯ ಸ್ಥಾನಿಯಾಗಿದೆ. ಆಸೀಸ್ ಎದುರಿನ ಮುಂದಿನ ಸರಣಿಯನ್ನು ಸೋಲದೆ, ಇದನ್ನು ದೊಡ್ಡ ಅಂತರದಿಂದ ಗೆದ್ದರೆ ಭಾರತಕ್ಕೆ ಮೇಲೇರುವ ಅವಕಾಶವಿದೆ.