ಹಾಸಿಗೆ ಹಿಡಿದಿರುವ ಪೀಲೆಗೆ ಕತಾರ್‌ನಿಂದ ಶುಭ ಹಾರೈಕೆ
Team Udayavani, Dec 5, 2022, 11:15 PM IST
ದೋಹಾ: ಫುಟ್ ಬಾಲ್ ಲೆಜೆಂಡ್, 82 ವರ್ಷದ ಪೀಲೆ ಹೆಸರು ಗೊತ್ತಿಲ್ಲದವರು ಯಾರು? ಫುಟ್ ಬಾಲ್ ಎಂದರೆ ಪೀಲೆ ಎನ್ನುವ ಮಟ್ಟಿಗೆ ಅವರು ಜನಪ್ರಿಯರು. ಕೆಲವು ವರ್ಷಗಳಿಂದ ಅವರಿಗೆ ಕ್ಯಾನ್ಸರ್ ಕಾಡುತ್ತಿದೆ. ಕೊರೊನಾ ವೇಳೆ ಉಸಿರಾಟದ ಸೋಂಕಿಗೂ ತುತ್ತಾದರು.
ಹಾಗಾಗಿ ಅಭಿಮಾನಿಗಳಿಗೆ ಸಹಜವಾಗಿಯೇ ಆತಂಕ. ಇತ್ತೀಚೆಗೆ ಮತ್ತೆ ಅವರು ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಸಾವೋ ಪೌಲೋ ಆಸ್ಪತ್ರೆ ಸೇರಿದ್ದಾರೆ. “ಭೀತಿಪಡುವ ಅಗತ್ಯವಿಲ್ಲ. ಅವರು ಸಾಯುವ ಸ್ಥಿತಿಯಲ್ಲಿಲ್ಲ’ ಎಂದು ಅವರ ಮಕ್ಕಳು ಹೇಳಿದ್ದಾರೆ.
ಈ ನಡುವೆ ಕತಾರ್‌ನಲ್ಲಿ ಪೀಲೆ ಪೀಲೆ ಎಂಬ ಕೂಗು ಜೋರಾಗಿದೆ. ಬ್ರಝಿಲ್-ಕ್ಯಾಮರೂನ್ ನಡುವಿನ ಪಂದ್ಯದ ವೇಳೆ ಪೀಲೆಯ ದೊಡ್ಡ ಚಿತ್ರಗಳನ್ನು ಹಾರಾಡಿಸಲಾಯಿತು. ಸೌಖೀ ವಕ್ಫ್ ಎಂಬ ಸ್ಥಳದಲ್ಲಿ ಪೀಲೆಯ ದೊಡ್ಡ ಮೇಣದ ಪ್ರತಿಮೆಯನ್ನೇ ಸ್ಥಾಪಿಸಲಾಗಿದೆ. ಖಲೀಫ ಮೈದಾನದಲ್ಲಿ ಒಂದು ದೊಡ್ಡ ಎಲ್‌ಇಡಿ ಟವರ್ ಇದೆ. ಅಲ್ಲೂ ಪೀಲೆಯ ಬೃಹತ್ ಚಿತ್ರ ಕಾಣಿಸುತ್ತದೆ. ಅದರ ಕೆಳಗೆ “ಫುಟ್ ಬಾಲ್ ನ ಸರ್ವಶ್ರೇಷ್ಠ ಪೀಲೆ ಬೇಗ ಚೇತರಿಸಿಕೊಳ್ಳಲಿ’ ಎಂಬ ಹಾರೈಕೆಯೂ ಇದೆ.