ಮೆರಾಜ್ ಮಿಂಚು: ದಿಲ್ಲಿಗೆ ಜಯ
Team Udayavani, Dec 1, 2018, 6:50 AM IST
ನವದೆಹಲಿ: ಪ್ರೊ ಕಬಡ್ಡಿ ಆರನೇ ಆವೃತ್ತಿ ಕೂಟದ ದಿಲ್ಲಿ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ದಬಾಂಗ್ ದಿಲ್ಲಿ 48-35 ಅಂತರದಿಂದ ಜೈಪುರ ಪಿಂಕ್ಪ್ಯಾಂಥರ್ ವಿರುದ್ಧ ಗೆಲುವುಗಳಿಸಿದೆ.
ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೆರಾಜ್ ಶೇಖ್ (15 ಅಂಕ) ರೈಡಿಂಗ್ನಿಂದ ಅಬ್ಬರಿಸಿದರು. ತಂಡದ ಇನ್ನಿಬ್ಬರು ರೈಡರ್ಗಳಾದ ನವೀನ್ ಕುಮಾರ್ (9 ಅಂಕ) ಹಾಗೂ ಚಂದ್ರನ್ ರಂಜಿತ್ (9 ಅಂಕ) ಅವರಿಗೆ ಭರ್ಜರಿ ಸಾಥ್ ನೀಡಿದರು. ಜತೆಗೆ ರವೀಂದ್ರ ಪಾಹಲ್ (5 ಅಂಕ) ಪ್ರಚಂಡ ಟ್ಯಾಕಲ್ ನಡೆಸಿದರು.
ದೀಪಕ್ ಏಕಾಂಗಿ ಹೋರಾಟ: ಜೈಪುರ ಪಿಂಕ್ ಪ್ಯಾಂಥರ್ಸ್ ಪರ ದೀಪಕ್ ಹೂಡಾ (20 ಅಂಕ) ಹಾಗೂ ಅಜಿಂಕ್ಯ ಪವಾರ್ (6 ಅಂಕ) ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ರಕ್ಷಣಾ ವಿಭಾಗದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರಿಂದ ಜೈಪುರ ಸೋಲು ಅನುಭವಿಸುವಂತಾಯಿತು.