ಗೆಳತಿ ಕಾಟರೆಲ್ ಜತೆ ಜೋ ರೂಟ್ ವಿವಾಹ
Team Udayavani, Dec 3, 2018, 6:30 AM IST
ಲಂಡನ್: ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಮದುವೆಯ ಸೀಸನ್ ಆರಂಭಗೊಂಡಂತಿದೆ. ಸೀಮಿತ ಓವರ್ ತಂಡದ ನಾಯಕ ಇಯಾನ್ ಮಾರ್ಗನ್ ಮದುವೆಯಾದ ಬೆನ್ನಲ್ಲೇ ಟೆಸ್ಟ್ ನಾಯಕ ಜೋ ರೂಟ್ ವಿವಾಹ ಬಂಧಕ್ಕೊಳಗಾಗಿದ್ದಾರೆ. ಶನಿವಾರ ಶೆಫೀಲ್ಡ್ನಲ್ಲಿ ಗೆಳತಿ ಕ್ಯಾರಿ ಕಾಟರೆಲ್ ಜತೆ ರೂಟ್ ವಿವಾಹ ಏರ್ಪಟ್ಟಿದೆ.
ಇವರಿಬ್ಬರೂ 2016ರಿಂದಲೂ ಒಟ್ಟಿಗೇ ಸುತ್ತಾಡುತ್ತಿದ್ದರು. ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತಕ್ಕೆ ತೆರಳುವ ಮುನ್ನ ಕಾಟರೆಲ್ ಜತೆ ರೂಟ್ ಮದುವೆ ಪ್ರಸ್ತಾವ ಮಾಡಿದ್ದರು. ಇದಕ್ಕೆ ಹುಡುಗಿಯ ಕುಟುಂಬದವರು ಸಮ್ಮತಿಸಿದ್ದರು. ಯಶಸ್ವಿ ಶ್ರೀಲಂಕಾ ಪ್ರವಾಸ ಮುಗಿದ ಬಳಿಕ ಮದುವೆ ನಡೆಸಲು ನಿರ್ಧರಿಸಲಾಗಿತ್ತು.
ಶನಿವಾರ ವಿವಾಹ ವಿಧಿವಿಧಾನ ನಡೆದಿದ್ದು, ವಧು ಕ್ಯಾರಿ ಕಾಟರೆಲ್ ತಂದೆ ಹಾಗೂ ಸಹೋದರನೊಂದಿಗೆ ರೋಲ್ಸ್ ರಾಯ್ಸ ಕಾರಿನಲ್ಲಿ ಆಗಮಿಸಿದರು ಎಂಬುದಾಗಿ “ಡೈಲಿ ಮಿರರ್’ ವರದಿ ಮಾಡಿದೆ.