ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ಗೆ ಸತತ 2ನೇ ಸೋಲು
ಪುನೇರಿ ಪಲ್ಟಾನ್ ಗೆ ಮೊದಲ ಜಯ
Team Udayavani, Oct 16, 2022, 10:56 PM IST
ಬೆಂಗಳೂರು: ಆತಿಥೇಯ ಬೆಂಗಳೂರು ಬುಲ್ಸ್ ಸತತ 2ನೇ ಸೋಲಿನ ಆಘಾತಕ್ಕೆ ಸಿಲುಕಿದೆ. ರವಿವಾರದ ಮುಖಾಮುಖಿಯಲ್ಲಿ ಅದು ಯುಪಿ ಯೋಧಾಸ್ ವಿರುದ್ಧ 37-44 ಅಂತರದಿಂದ ಎಡವಿತು.
ಇದು 4 ಪಂದ್ಯಗಳಲ್ಲಿ ಬುಲ್ಸ್ಗೆ ಎದುರಾದ 2ನೇ ಸೋಲಾದರೆ, ಯೋಧಾಸ್ ಇಷ್ಟೇ ಪಂದ್ಯಗಳಲ್ಲಿ ಸಾಧಿಸಿದ 2ನೇ ಗೆಲುವು.
ರೈಡರ್ಗಳಾದ ಪದೀಪ್ ನರ್ವಾಲ್, ಸುರೇಂದರ್ ಗಿಲ್ (ತಲಾ 14 ಅಂಕ) ಅಮೋಘ ಪ್ರದರ್ಶನ ನೀಡಿ ಯೋಧಾಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಬುಲ್ಸ್ ರೈಡರ್ಗಳಾದ ವಿಕಾಸ್ ಕಂಡೋಲ (12 ಅಂಕ), ಭರತ್ (9) ಉತ್ತಮ ಹೋರಾಟ ಸಂಘಟಿಸಿದರೂ ಯೋಧಾಸ್ ಅಕ್ರಮಣದ ಮುಂದೆ ಇವರ ಆಟ ನಡೆಯಲಿಲ್ಲ.
ಪುನೇರಿಗೆ ಮೊದಲ ಜಯ: ಮೊದಲ ಪಂದ್ಯದಲ್ಲಿ ಯು ಮುಂಬಾವನ್ನು 30-28 ಅಂತರದಿಂದ ಕೆಡವಿದ ಪುನೇರಿ ಪಲ್ಟಾನ್ ಗೆಲುವಿನ ಖಾತೆ ತೆರೆಯಿತು. ಮುಂಬಾ 4 ಪಂದ್ಯಗಳಲ್ಲಿ 2ನೇ ಸೋಲುಂಡಿತು.