ರೋಹಿತ್: ಆಸೀಸ್ ಎದುರು 100 ಸಿಕ್ಸರ್
Team Udayavani, Jan 9, 2021, 5:30 AM IST
ಐಪಿಎಲ್ ವಿಕ್ಟರಿ ಬಳಿಕ ಮೊದಲ ಸಲ ಬ್ಯಾಟ್ ಹಿಡಿದ ರೋಹಿತ್ ಶರ್ಮ ಅಪರೂಪದ ಸಾಧನೆಯಿಂದ ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನಥನ್ ಲಿಯಾನ್ ಎಸೆದ ಇನ್ನಿಂಗ್ಸಿನ 16ನೇ ಓವರಿನಲ್ಲಿ ಸಿಕ್ಸರ್ ಎತ್ತುವ ಮೂಲಕ ರೋಹಿತ್ ಈ ಮೈಲುಗಲ್ಲು ನೆಟ್ಟರು. ಒಟ್ಟಾರೆಯಾಗಿ ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ ಬಾರಿಸಿದ 424ನೇ ಸಿಕ್ಸರ್. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಒಂದೇ ದೇಶದ ವಿರುದ್ಧ, ಎಲ್ಲ ಮೂರು ಮಾದರಿಗಳಲ್ಲಿ ಅತ್ಯಧಿಕ ಸಿಕ್ಸರ್ ಹೊಡೆದ ದಾಖಲೆ ಕ್ರಿಸ್ ಗೇಲ್ ಹೆಸರಲ್ಲಿದೆ. ಅವರು ಇಂಗ್ಲೆಂಡ್ ಎದುರು 140 ಸಿಕ್ಸರ್ ಸಿಡಿಸಿದ್ದಾರೆ.
ಭಾರತದ ಆರಂಭಿಕರನ್ನು ಕೆಣಕಿದ ಲಬುಶೇನ್ :
ಭಾರತ-ಆಸ್ಟ್ರೇಲಿಯ ಪಂದ್ಯವೆಂದರೆ ಅಲ್ಲಿ ಮಾತಿನ ಚಕಮಕಿ ನಡೆಯುವುದು ಮಾಮೂಲು. ಸಿಡ್ನಿ ಟೆಸ್ಟ್ ಪಂದ್ಯವೂ ಇದಕ್ಕೆ ಹೊರತಾಗಲಿಲ್ಲ.
ದ್ವಿತೀಯ ದಿನದ ಆಟದ ವೇಳೆ ಆಸ್ಟ್ರೇಲಿಯದ ಬ್ಯಾಟ್ಸ್ಮನ್ ಮಾರ್ನಸ್ ಲಬುಶೇನ್ ಟೀಮ್ ಇಂಡಿಯಾ ಆರಂಭಿಕರಾದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ಅವರನ್ನು ಪದೇಪದೇ ಕೆಣಕಿದರು. ಮೊದಲು ಗಿಲ್ ತಂಟೆಗೆ ಹೋದ ಅವರು, “ನಿಮಗೆ ಸಚಿನ್ ಮತ್ತು ಕೊಹ್ಲಿ ನಡುವೆ ಯಾರು ಇಷ್ಟ’ ಎಂದು ಕೇಳಿದರು. ಇದಕ್ಕೆ ಗಿಲ್ ಉತ್ತರಿಸಲಿಲ್ಲ. ಅನಂತರ ರೋಹಿತ್ ಸ್ಟ್ರೈಕ್ಗೆ ಬಂದರು. ಆಗ, ಕ್ವಾರಂಟೈನ್ ವೇಳೆ ಏನು ಮಾಡಿದಿರಿ ಎಂದು ಕೆಣಕಿದರು. ಇದನ್ನು ರೋಹಿತ್ ನಿರ್ಲಕ್ಷಿಸಿ ಸುಮ್ಮನಾದರು. ಆಟಗಾರರ ಏಕಾಗ್ರತೆಗೆ ಭಂಗ ತರಲು ಆಸೀಸ್ ಕ್ರಿಕೆಟಿಗರು ಇಂಥ ತಂತ್ರ ಹೂಡುವುದು ಮಾಮೂಲು.