“ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ನಾಯಕ”: ಹಾಡಿ ಹೊಗಳಿದ ಮಾಜಿ ಆಟಗಾರ
Team Udayavani, Dec 31, 2021, 1:50 PM IST
ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಭಾರತ ತಂಡ ಸರಣಿಯಲ್ಲಿ ಶುಭಾರಂಭ ಮಾಡಿದೆ. ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆದ ಮೊದಲ ಪಂದ್ಯವನ್ನು ಸುಲಭದಲ್ಲಿ ಗೆದ್ದ ವಿರಾಟ್ ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸುವ ಭರವಸೆ ಮೂಡಿಸಿದೆ.
ಭಾರತದ ಟೆಸ್ಟ್ ಜಯವನ್ನು ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೊಂಡಾಡಿದ್ದಾರೆ. ಸೆಂಚೂರಿಯನ್ ನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದ ನಾಯಕ ವಿರಾಟ್ ಕೊಹ್ಲಿಯನ್ನು ವಿನೋದ್ ಕಾಂಬ್ಳಿ “ ವಿಶ್ವ ಶ್ರೇಷ್ಠ ನಾಯಕ” ಎಂದು ಹೊಗಳಿದ್ದಾರೆ.
“ನಾಯಕತ್ವದಲ್ಲಿ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ, ಹವಾಮಾನವೂ ನಮಗೆ ವಿರುದ್ಧವಾಗಿದೆ! ಆದರೆ ನಾವು ಏನು ಮಾಡಿದ್ದೇವೆ ಎಂಬುದನ್ನು ನೋಡಿ, ನಾವು ಅದ್ಭುತಗಳನ್ನು ಮಾಡಿದ್ದೇವೆ. ಕೊಹ್ಲಿ ಅವರು ವಿಶ್ವದ ಅತ್ಯುತ್ತಮ ನಾಯಕ ಏಕೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಬಾರಿ ಸರಣಿಯ ಜೊತೆ ಬ್ಯಾಟಿಂಗ್ ನಲ್ಲೂ ಹಳೆಯ ಕೊಹ್ಲಿ ಹಿಂತಿರುಗಿದ್ದಾರೆ,” ಎಂದು ಕಾಂಬ್ಳಿ ‘ಕೂ’ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರ್ವಾಧಿಕ ಎಂಟು ಟೆಸ್ಟ್ ಗೆದ್ದ ರಿಕಿ ಪಾಂಟಿಂಗ್ ಅವರ ನಾಯಕತ್ವದ ದಾಖಲೆಯನ್ನು ಸರಿದೂಗಿಸಿದರು.