ಟೆಸ್ಟ್ ಪಂದ್ಯ: ಬಾಂಗ್ಲಾದೇಶಕ್ಕೆ ವೈಟ್‌ವಾಶ್ ಮಾಡಿದ ವೆಸ್ಟ್ ಇಂಡೀಸ್
Team Udayavani, Jun 29, 2022, 5:38 PM IST
ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ): ಪ್ರವಾಸಿ ಬಾಂಗ್ಲಾದೇಶ ಎದುರಿನ ದ್ವಿತೀಯ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದ ವೆಸ್ಟ್ ಇಂಡೀಸ್ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ಗೆಲುವಿಗೆ 13 ರನ್ ಗುರಿ ಪಡೆದ ವೆಸ್ಟ್ ಇಂಡೀಸ್, 4ನೇ ದಿನ ಸುಲಭದಲ್ಲಿ ಗೆದ್ದು ಬಂತು. ಮೊದಲ ಟೆಸ್ಟ್ ಪಂದ್ಯವನ್ನು ಕೆರಿಬಿಯನ್ ಪಡೆ 7 ವಿಕೆಟ್‌ಗಳಿಂದ ಜಯಿಸಿತ್ತು.
174 ರನ್ನುಗಳ ಭಾರೀ ಹಿನ್ನಡೆ ಸಿಲುಕಿದ ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 186ಕ್ಕೆ ಉದುರಿತು. ಇನ್ನಿಂಗ್ಸ್ ಸೋಲಿನಿಂದ ಪಾರಾದುದಷ್ಟೇ ಬಾಂಗ್ಲಾ ಪಾಲಿನ ಸಮಾಧಾನಕರ ಸಂಗತಿ. ಕೆಮರ್ ರೋಚ್, ಅಲ್ಜಾರಿ ಜೋಸೆಫ್ ಮತ್ತು ಜೇಡನ್ ಸೀಲ್ಸ್ ತಲಾ 3 ವಿಕೆಟ್ ಕೆಡವಿ ಬಾಂಗ್ಲಾದೇಶವನ್ನು ಸಂಕಷ್ಟಕ್ಕೆ ತಳ್ಳಿದರು. ನುರುಲ್ ಹುಸೇನ್ ಮಾತ್ರ ಆತಿಥೇಯರ ದಾಳಿಯನ್ನು ಎದುರಿಸಿ ನಿಂತು ಅಜೇಯ 60 ರನ್ ಹೊಡೆದರು.
ಇದನ್ನೂ ಓದಿ:ದೀಪಕ್ ಹೂಡಾ ಭರ್ಜರಿ ಶತಕ : ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ
ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಆಟವಾಡಿ 146 ರನ್ ಬಾರಿಸಿದ ಕೈಲ್ ಮೇಯರ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಒಟ್ಟು 6 ವಿಕೆಟ್ ಕೂಡ ಉರುಳಿಸಿದ ಸಾಧನೆಯಿಂದಾಗಿ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-234 ಮತ್ತು 186. ವೆಸ್ಟ್ ಇಂಡೀಸ್-408 ಮತ್ತು ವಿಕೆಟ್ ನಷ್ಟವಿಲ್ಲದೆ 13.