
ಫಿಫಾ ವಿಶ್ವಕಪ್: ಸೆನೆಗಲ್ ದಿಟ್ಟ ಹೋರಾಟ; ಕೊನೆಯಲ್ಲಿ ಡಚ್ ಡಿಚ್ಚಿ
Team Udayavani, Nov 22, 2022, 11:30 PM IST

ದೋಹಾ: ಪ್ರಬಲ ಡಚ್ ಪಡೆಯ ವಿರುದ್ಧ ದಿಟ್ಟ ಹೋರಾಟ ನೀಡಿದರೂ ಆಫ್ರಿಕನ್ ಚಾಂಪಿಯನ್ ಸೆನೆಗಲ್‌ಗೆ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. “ಅಲ್ ತುಮಾಮ ಸ್ಟೇಡಿಯಂ’ನಲ್ಲಿ ನಡೆದ “ಎ’ ವಿಭಾಗದ ವಿಶ್ವಕಪ್ ಸೆಣಸಾಟದಲ್ಲಿ ನೆದರ್ಲೆಂಡ್ಸ್ ಕೊನೆಯ ನಿಮಿಷಗಳಲ್ಲಿ ದಾಳಿಯನ್ನು ತೀವ್ರಗೊಳಿಸಿ 2-0 ಜಯಭೇರಿ ಮೊಳಗಿಸುವಲ್ಲಿ ಯಶಸ್ವಿಯಾಯಿತು.
85ನೇ ನಿಮಿಷದ ತನಕ ಎರಡೂ ತಂಡಗಳು ದಿಟ್ಟ ಹೋರಾಟವನ್ನೇ ನಡೆಸಿದವು. ಇತ್ತಂಡಗಳ ರಕ್ಷಣಾ ವಿಭಾಗ ಬೃಹತ್ ತಡೆಗೋಡೆಯಂತೆ ಕರ್ತವ್ಯ ನಿರ್ವಹಿಸಿತು. ಆದರೆ 85ನೇ ನಿಮಿಷದಲ್ಲಿ ಸೆನೆಗಲ್ ಕೋಟೆಗೆ ಡಚ್ ಪಡೆ ಲಗ್ಗೆ ಹಾಕಿಯೇ ಬಿಟ್ಟಿತು. “ರೈಸಿಂಗ್ ಸ್ಟಾರ್’ ಕೋಡಿ ಗಾಪ್ಕೊ ಆಕರ್ಷಕ ಹೆಡ್‌ಗೋಲ್ ಮೂಲಕ ನೆದರ್ಲೆಂಡ್ಸ್ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.
90 ಪ್ಲಸ್ 9ನೇ ನಿಮಿಷದಲ್ಲಿ ಬದಲಿ ಆಟಗಾರ ಡೇವಿ ಕ್ಲಾಸೆನ್ ಮತ್ತೂಂದು ಗೋಲು ಸಿಡಿಸಿ ಅಂತರವನ್ನು ಹೆಚ್ಚಿಸಿದರು.
ಎರಡೂ ತಂಡಗಳು ಗಾಯದ ಸಮಸ್ಯೆಗೆ ಸಿಲುಕಿದ್ದವು. ಸ್ಯಾಡಿಯೊ ಮಾನೆ ಗೈರು ಸೆನೆಗಲ್‌ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಪಂದ್ಯದ ಹಿಂದಿನ ದಿನ ಅವರು ಕಾಲು ನೋವಿಗೆ ಸಿಲುಕಿದ್ದರು. ಹಾಗೆಯೇ ನೆದರ್ಲೆಂಡ್ಸ್ ಆಕ್ರಮಣಕಾರಿ ಆಟಗಾರ ಎಂಫಿಸ್ ಡೀಪೆ ಸೇವೆಯಿಂದ ವಂಚಿತವಾಗಿತ್ತು.
3 ಬಾರಿಯ ರನ್ನರ್ ಅಪ್ ಹಾಗೂ 2014ರ ಸೆಮಿಫೈನಲಿಸ್ಟ್ ತಂಡವಾದ ನೆದರ್ಲೆಂಡ್ಸ್, 2018ರ ವಿಶ್ವಕಪ್ ಅರ್ಹತೆ ಸಂಪಾದಿಸುವಲ್ಲಿ ವಿಫಲವಾಗಿತ್ತು. ತಂಡದ ನಾಯಕ ವರ್ಜಿಲ್ ವಾನ್ ಡಿಕ್ ಆಡಿದ 50ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿತ್ತು.
ಟಾಪ್ ನ್ಯೂಸ್
