
ಸರಕಾರಿ ಗೋಶಾಲೆಗಳನ್ನು ಸ್ವಾವಲಂಬಿಯನ್ನಾಗಿಸಿ ಆತ್ಮ ನಿರ್ಭರ : ಪ್ರಭು ಚವ್ಹಾಣ್
ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ
Team Udayavani, Jun 26, 2022, 6:53 PM IST

ನೆಲಮಂಗಲ: ಸರ್ಕಾರಿ ಗೋಶಾಲೆಗಳನ್ನು ಸ್ವಾವಲಂಬಿಯನ್ನಾಗಿಸಿ, ಆತ್ಮ ನಿರ್ಭರ ಗೋಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರು ಹೇಳಿದರು.
ತಾಲೂಕಿನ ಕೋಡಿಗೆಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ಗೋಶಾಲೆಗೆ ಶಂಕುಸ್ಥಾಪನೆ ನೇರವೇರಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೋವುಗಳು ಕಸಾಯಿಖಾನೆಗಳನ್ನು ಹೋಗುವುದನ್ನು ತಡೆಗಟ್ಟಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದರು.
ಕಾನೂನು ಬಾಹಿರ ಕಸಾಯಿಖಾನೆಗಳನ್ನು ಮುಚ್ಚುವ ಸಲುವಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು 2012ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಆನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ನಿಷೇಧಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಗೋವುಗಳ ಸಂರಕ್ಷಣೆಯ ಸಲುವಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಗೋವುಗಳನ್ನು ಸಂರಕ್ಷಣೆ ಮಾಡಲು ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಗೆ ಕ್ರಮ ವಹಿಸಲಾಯಿತು ಎಂದು ಪ್ರಭು ಚವ್ಹಾಣ್ ಅವರು ಸ್ಪಷ್ಟಪಡಿಸಿದರು.
ರಾಜ್ಯದ ಎಲ್ಲಾ ಜಿಲ್ಲೆ ಗೋಶಾಲೆಗಳು ನಿರ್ಮಾಣ ಹಂತದಲ್ಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೋಶಾಲೆ ಕಡೆಯದ್ದಾಗಿದ್ದು, ಇದ್ದಕ್ಕೂ ನಿಮ್ಮ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದ ಸಚಿವರು, ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮೇಗಾ ಡೈರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಗೋಶಾಲೆಗಳನ್ನು ಸ್ವಾವಲಂಬಿಗಳಾಗಿಸಲು ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಉತ್ಪನ್ನಗಳನ್ನು ತಯಾರಿಕೆ ಮಾಡುವ ಉದ್ದೇಶವಿದೆ. ರಾಜ್ಯದಲ್ಲಿ 100 ಗೋಶಾಲೆಗಳನ್ನು ನಿರ್ಮಾಣ ಮಾಡಿ ಗೋ ಸಂಕುಲವನ್ನು ರಕ್ಷಣೆ ಮಾಡುವುದಾಗಿದೆ ಎಂದು ಸಚಿವರು ತಿಳಿಸಿದರು.
ನಾನು ಸಚಿವನಾದ ನಂತರದಲ್ಲಿ ಪಶು ಸಂಗೋಪನಾ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಕಳೆದ ಹನ್ನೆರಡು ವರ್ಷಗಳಿಂದ ಬಾಕಿ ಉಳಿದಿದ್ದ ನೇಮಕಾತಿಗೆ ಚಾಲನೆ ಹಾಗೂ ಪದೋನ್ನತಿ ನೀಡಿ ಇಲಾಖೆಯನ್ನು ಅಭಿವೃದ್ಧಿಗೊಳಿಸುತ್ತಿದ್ದೇನೆ. 400 ಪಶು ವೈದ್ಯರ ನೇಮಕ, 250 ಪಶು ವೈದ್ಯಕೀಯ ಸಿಬ್ಬಂದಿಗಳ ನೇಮಕ ಪಶು ಸಂಗೋಪನೆ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲು ಎಂದು ಪ್ರಭು ಚವ್ಹಾಣ್ ಅವರು ಪಶು ಸಂಗೋಪನೆ ಇಲಾಖೆ ಕಾರ್ಯವೈಖರಿಯನ್ನು ವಿವರಿಸಿದರು.
ರೈತರ ಜಾನುವಾರುಗಳ ಆರೈಕೆಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ರಾಜ್ಯದಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್, ಸಂಚಾರಿ ಚಿಕಿತ್ಸಾಲಯಗಳು, ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ನೀವು ಕರೆ ಮಾಡಿದ ತಕ್ಷಣ ವೈದ್ಯರು, ಪರಿವೀಕ್ಷಕರು ಮತ್ತು ಸಿಬ್ಬಂದಿಗಳ ನುರಿತ ತಂಡ ಆಂಬ್ಯುಲೆನ್ಸ್ ಸಮೇತ ನಿಮ್ಮ ಮನೆಗೆ ಬಂದು ಚಿಕಿತ್ಸೆ ನೀಡುತ್ತಾರೆ. ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವ ಪ್ರಭು ಚವ್ಹಾಣ್ ಇದೇ ವೇಳೆ ಕರೆ ನೀಡಿದರು.
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಜಾನುವಾರು ಸಂಕುಲ ರಕ್ಷಣೆಯೇ ನಮ್ಮ ಸರ್ಕಾರದ ಗುರಿಯಾಗಿದೆ. ಪಶುವೈದ್ಯಕೀಯ ವೈದ್ಯರು, ಸಿಬ್ಬಂದಿಗಳು ಸದಾ ಜಾನುವಾರುಗಳ ಸೇವೆಗೆ ಸಿದ್ಧರಾಗಿರಬೇಕು. ನಿಮ್ಮ ಪೋನುಗಳ ಸ್ವೀಚ್ಡ್ ಆಫ್ ಆಗದೇ ಸದಾ ಚಾಲ್ತಿಯಲ್ಲಿರುವಂತೆ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದ ಪ್ರಭು ಚವ್ಹಾಣ್ ಅವರು, ರೈತರಿಗೆ ಸ್ಪಂದಿಸದಿದ್ದರೇ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಶುಸಂಗೋಪನೆ ಇಲಾಖೆಯಲ್ಲಿ ಜಾರಿಗೆ ಬಂದ ಪಶು ಸಹಾಯವಾಣಿ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಶೇ.75ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ರಾಜ್ಯಾದ್ಯಂತ 715 ಎಫ್.ಐ.ಆರ್ ದಾಖಲಿಸಿ, 15000ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಬಿಡಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಗೋಹತ್ಯೆ ನಿಷೇಧ ಕಾಯ್ದೆ, ಪಶು ಸಂಜಿವೀನಿ ಆ್ಯಂಬುಲೆನ್ಸ್, ಪಶು ಸಂಚಾರಿ ಚಿಕಿತ್ಸಾಲಯ, ಪಶು ಚಿಕಿತ್ಸಾಲಯಗಳು ಮತ್ತು ಗೋಶಾಲೆಗಳ ನಿರ್ಮಾಣದಿಂದಾಗಿ ಹೈನುಗಾರಿಕೆಗೆ ಪ್ರೋತ್ಸಾಹಿಸುತ್ತಿದ್ದೇನೆ ಎಂದು ತಾವು ಸಚಿವರಾದ ನಂತರದಲ್ಲಿ ಇಲಾಖೆೃಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಎಳೆ ಎಳೆಯಾಗಿ ಪ್ರಭು ಚವ್ಹಾಣ್ ಬಿಚ್ಚಿಟ್ಟರು.
ಅಧ್ಯಕ್ಷತೆ ವಹಿಸಿದ್ದ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರು, ಕೃಷಿ ಪ್ರಧಾನವಾದ ನೆಲಮಂಗಲ ತಾಲ್ಲೂಕಿಗೆ ಆರು ಪಶು ಚಿಕಿತ್ಸಾಲಯಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್, ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಈಗಾಗಲೇ 30 ಪಶು ಚಿಕಿತ್ಸಾಲಯಗಳನ್ನು ಮಂಜೂರು ಮಾಡಲಾಗಿದೆ. ನಿಮ್ಮ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ತಾಲ್ಲೂಕಿಗೆ ನಾನು ಒಂದು ಪಶು ಚಿಕಿತ್ಸಾಲಯ ನೀಡುತ್ತೇನೆ ಎಂದು ಸಮಾರಂಭದಲ್ಲೇ ಘೋಷಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗೋಮಾತೆಗೆ ಪೂಜೆ ನೆರವೇರಿಸಿದ ಸಚಿವ ಪ್ರಭು ಚವ್ಹಾಣ್ ಅವರು, ಶಂಕುಸ್ಥಾಪನೆ ನಾಮಫಲಕ ಅನಾವರಣಗೊಳಿಸಿ, ಸಸಿ ನೆಟ್ಟು ನೀರೆರೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ, ಸಹಾಯಕ ಆಯುಕ್ತ ತೇಜಸ್ ಕುಮಾರ್, ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಇದೇ ವೇಳೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
