ಕೊರೊನಾ ವೈರಸ್ ಭೀತಿ ದುರ್ಬಳಕೆ: ಇಬ್ಬರ ಸೆರೆ
Team Udayavani, Mar 21, 2020, 3:05 AM IST
ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್‌ಗಳನ್ನು ತಯಾರು ಮಾಡುತ್ತಿದ್ದ ಗೋದಾಮಿನ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ದಾಳಿಗಳಲ್ಲಿ 56 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್, ಹ್ಯಾಂಡ್ ರಬ್‌ಗಳ ತಯಾರಿಕೆಯ ದ್ರಾವಣವನ್ನು ಜಪ್ತಿ ಮಾಡಲಾಗಿದೆ. ತಯಾರಿಕೆ ಮಾಡಿದ್ದ ರಾಜು, ಚಂದನ್ ಎಂಬುವವರನ್ನು ಬಂಧಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಸ್ಯಾನಿಟೈಸರ್ ತಯಾರಿಕೆ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ಎರಡು ಪ್ರತ್ಯೇಕ ತಂಡಗಳು ನ್ಯೂ ತರಗುಪೇಟೆಯ ಜ್ಯೋತಿ ಕೆಮಿಕಲ್ಸ್ ಹಾಗೂ ಸ್ವಾತಿ ಅಂಡ್ ಕೊ ಹೆಸರಿನ ಗೋದಾಮುಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದ್ರಾವಣವನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಇಸೋಪ್ರೊಫೇಲ್ ಅಲ್ಕೋ ಹಾಲ್ ಹೆಸರಿನ ದ್ರಾವಣಕ್ಕೆ ಬ್ರಿಲಿಯಂಟ್ ಬ್ಲೂ ಕಲರ್ ಹೆಸರಿನ ದ್ರಾವಣ ಬೆರೆಸಿ ಸ್ಯಾನಿಟೈಸರ್, ಹ್ಯಾಂಡ್ ರಬ್‌ಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಪ್ಲಾಸ್ಟಿಕ್ ಬಾಟೆಲ್‌ಗಳಲ್ಲಿ ತುಂಬಿಸಿ ಮಾರುಕಟ್ಟೆ ದರಕ್ಕಿಂತ ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.