
ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು
Team Udayavani, May 29, 2023, 8:10 AM IST

ಬೆಂಗಳೂರು: ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಬಯಸಿದ ಖಾತೆ ಸಿಕ್ಕಿಲ್ಲ ಎಂಬ ಅಸಮಾಧಾನ ಪರ್ವ ಆರಂಭವಾಗಿದ್ದು, ಮುನಿಸಿಕೊಂಡವರನ್ನು ಸಮಾಧಾನಪಡಿಸುವ ಕಸರತ್ತು ನಡೆಯುತ್ತಿದೆ.
ಸಾರಿಗೆ ಖಾತೆಯಿಂದ ಮುನಿಸಿಕೊಂಡಿದ್ದ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವಲ್ಲಿ ಕೊನೆಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜತೆಗೆ ಮುಜರಾಯಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಬೇಡವೆಂದು ಬಿ. ನಾಗೇಂದ್ರ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಶಿವರಾಜ ತಂಗಡಗಿ ಅವರಿಗೆ ನೀಡಲಾಗಿದೆ. ಅವರ ಬಳಿ ಇದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆಯನ್ನು ನಾಗೇಂದ್ರ ಅವರಿಗೆ ವರ್ಗಾಯಿಸಲಾಗಿದೆ. ಆರ್.ಬಿ. ತಿಮ್ಮಾಪುರ ಬಳಿ ಅಬಕಾರಿ ಮಾತ್ರ ಉಳಿದಿದೆ.
ಖಾತೆಯ ಪಟ್ಟಿಗೆ ರಾಜ್ಯಪಾಲರ ಅಂಕಿತವಾಗಿ ರಾಜ್ಯಪತ್ರದಲ್ಲಿ ಪ್ರಕಟವಾಗಿಲ್ಲ.
ಉಪ ಸಭಾಧ್ಯಕ್ಷ ಸ್ಥಾನ ನಿರಾಕರಣೆ
ಸಚಿವರಾಗುವ ಪಟ್ಟಿಯಲ್ಲಿದ್ದು, ಕೊನೆಯ ಹಂತದಲ್ಲಿ ತಪ್ಪಿಸಿಕೊಂಡ ಪುಟ್ಟರಂಗಶೆಟ್ಟಿ ವಿಧಾನಸಭಾ ಉಪಸಭಾಧ್ಯಕ್ಷ ಹುದ್ದೆಯನ್ನು ನಿರಾಕರಿಸಿದ್ದಾರೆ. ರವಿವಾರ ಬೆಂಬಲಿಗರ ಜತೆ ಸಭೆ ನಡೆಸಿದ ಅವರು, ಉಪಾಧ್ಯಕ್ಷ ಸ್ಥಾನ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅವರ ಮನವೊಲಿಸುವ ಕೆಲಸ ಮುಂದುವರಿದಿದೆ.
ಜಿಲ್ಲಾ ಉಸ್ತುವಾರಿಗಾಗಿ ಹಲವರ ಕಸರತ್ತು
ಖಾತೆ ಹಂಚಿಕೆ ಆದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಕಸರತ್ತು ಆರಂಭವಾಗಿದೆ. ಇಂಥದ್ದೇ ಜಿಲ್ಲೆ ಉಸ್ತುವಾರಿ ನೀಡಿ ಎಂದು ಸಚಿವರು ಸಿಎಂಗೆ ದುಂಬಾಲು ಬೀಳುತ್ತಿದ್ದರೆ, ಮತ್ತೂಂದೆಡೆ ನಮ್ಮ ಜಿಲ್ಲೆಗೆ ಇಂಥವರು ಬೇಡ ಎಂಬ ಒತ್ತಡವೂ ಪ್ರಾರಂಭವಾಗಿದೆ.
ಆದರೆ ಮುಖ್ಯಮಂತ್ರಿಯವರ ಕಚೇರಿಯಿಂದ ರಾಜಭವನ ತಲುಪಿದೆ ಎನ್ನಲಾದ ಪಟ್ಟಿಯೇ ಎಲ್ಲೆಡೆ ವೈರಲ್ ಆಗಿದ್ದು, ಅದೇ ಅಂತಿಮ ಎಂದು ಖಚಿತವಾದ ಅನಂತರ ಕೆಲವರು ಹಂಚಿಕೆಯಾಗಿರುವ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ರೆಡ್ಡಿ ಮನವೊಲಿಸಿದ ಡಿಕೆಶಿ
ಸಾರಿಗೆ ಖಾತೆ ಬೇಡ, ಬೇಕಾದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಖುದ್ದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೌಡಾಯಿಸಿ ಮಾತುಕತೆ ನಡೆಸಿದ್ದರು. ಮುಖ್ಯಮಂತ್ರಿ ಹೊರತುಪಡಿಸಿದರೆ ನಾನೇ ಹಿರಿಯ. ಆದರೆ, ನನಗಿಂತ ಕಿರಿಯರಿಗೆ ಪ್ರಮುಖ ಖಾತೆ ನೀಡಿ ನನಗೆ ಸಾರಿಗೆ ಖಾತೆ ನೀಡಲಾಗಿದೆ. ಇದು ನನಗೆ ಮಾಡಿರುವ ಅವಮಾನ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ರಾಮಲಿಂಗಾ ರೆಡ್ಡಿ ನೇರವಾಗಿ ಹೇಳಿದ್ದರು. ಕೊನೆಗೆ ಅವರನ್ನು ಸಮಾಧಾನಪಡಿಸಿ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಲಾಯಿತು.
ಮತ್ತೂಂದೆಡೆ ಗೃಹ ಖಾತೆ ತಮಗೆ ಬೇಡ ಕಂದಾಯ ಖಾತೆ ಕೊಡಿ ಎಂದು ಡಾ| ಪರಮೇಶ್ವರ್, ಕಾನೂನು ಸಂಸದೀಯ ಜತೆಗೆ ಸಣ್ಣ ನೀರಾವರಿ ಖಾತೆಯೂ ಇರಲಿ, ಪ್ರವಾಸೋದ್ಯಮ ಬೇಡ ಎಂದು ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಬೇಡ, ಗೃಹ ಖಾತೆ ಬೇಕು ಎಂದು ಪ್ರಿಯಾಂಕ್ ಖರ್ಗೆ ಪಟ್ಟು ಹಿಡಿದಿದ್ದಾರೆ. ಸಕ್ಕರೆ ಮತ್ತು ಜವಳಿ ಖಾತೆ ನೀಡಿರುವುದಕ್ಕೆ ಶಿವಾನಂದ ಪಾಟೀಲ್ ಬೇಸರಗೊಂಡಿದ್ದು, ಬೇರೆ ಖಾತೆ ಕೇಳಿದ್ದಾರೆ ಎಂದು ಹೇಳಲಾಗಿದೆ.
ಹಿಂದೆ ನಾನು ಗೃಹ ಖಾತೆ ನಿಭಾಯಿಸಿದ್ದೇನೆ. ಈಗ ಕಂದಾಯ ಖಾತೆ ಕೊಡಿ ಎಂದು ಡಾ| ಪರಮೇಶ್ವರ್ ಅವರು ಬೇಡಿಕೆ ಇರಿಸಿದ್ದಾರೆ. ಆದರೆ ಕಂದಾಯ ಖಾತೆಯನ್ನು ಈಗಾಗಲೇ ಕೃಷ್ಣಬೈರೇಗೌಡರಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೆಲವು ಸಚಿವರ ಜತೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸೋಣ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ| ಶರಣ ಪ್ರಕಾಶ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರವಿವಾರ ಭೇಟಿ ಮಾಡಿ ಚರ್ಚಿಸಿದರು.
ಯಾವುದೇ ಗೊಂದಲ ಇಲ್ಲ
ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಖಾತೆ ಹಂಚಿಕೆ ಅಥವಾ ಸಂಪುಟ ರಚನೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಯಾರಿಗೂ ಅಸಮಾಧಾನ ಇಲ್ಲ ಎಂದರು. ರಾಮಲಿಂಗಾ ರೆಡ್ಡಿ ಅವರು ಸತತ ಎಂಟು ಬಾರಿ ಗೆದ್ದಿದ್ದಾರೆ. ಅವರು ಬಿಟ್ಟರೆ ನಾನೇ ಹಿರಿಯ. ಪಕ್ಷಕ್ಕಾಗಿ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ನಮ್ಮ ಹಿತಾಸಕ್ತಿಗಿಂತ ನಮ್ಮನ್ನು ನಂಬಿದ ಕಾರ್ಯಕರ್ತರು ಮುಖ್ಯ. ನಾವೆಲ್ಲ ಸೇರಿ ಪಕ್ಷ ಕಟ್ಟಿ ಬೆಳೆಸಿದ್ದೇವೆ. ಬೇರೆ ಪಕ್ಷಕ್ಕೆ ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ, ಆದರೆ ನಮಗೆ ಕಾಂಗ್ರೆಸ್ ಪಕ್ಷವೇ ಭವಿಷ್ಯ ಎಂದು ಸೂಕ್ಷ್ಮವಾಗಿ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JD(S) ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳಬಾರದು ಅಷ್ಟೇ : ಸಿಎಂ ಸಿದ್ದರಾಮಯ್ಯ

Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

September 29 ರಂದು ಕರ್ನಾಟಕ ಬಂದ್ ; ನೂರಾರು ಸಂಘಟನೆಗಳ ಬೆಂಬಲ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ
MUST WATCH
ಹೊಸ ಸೇರ್ಪಡೆ

JD(S) ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳಬಾರದು ಅಷ್ಟೇ : ಸಿಎಂ ಸಿದ್ದರಾಮಯ್ಯ

Bagalkote ಅ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

Google 25 ವರ್ಷಗಳ ಸಂಭ್ರಮ: ಬಾಡಿಗೆ ಗ್ಯಾರೇಜ್ ನಲ್ಲಿ ಹುಟ್ಟಿಕೊಂಡಿದ್ದ ಸಂಸ್ಥೆ!

AAP: ಲೋಕಸಭೆ ಚುನಾವಣೆ – ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿ ಪ್ರಕಟಿಸಿದ ಆಪ್

Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ